
ಪ್ರಗತಿವಾಹಿನಿ ಸುದ್ದಿ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಪ್ರಸಿದ್ಧ ವಿರಕ್ತಮಠದ ಪೂಜ್ಯ ಚನ್ನಬಸವ ಸ್ವಾಮೀಜಿಗಳು (97) ಲಿಂಗೈಕ್ಯರಾಗಿದ್ದಾರೆ.
ಶ್ರೀಗಳು ಬಸವಾದಿ ಶರಣರ ವಚನಗಳು, ಮಾನವೀಯತೆ ಮತ್ತು ಸಮಾನತೆಯ ಸಂದೇಶಗಳನ್ನು ಶಿಲೆಗಳ ಮೇಲೆ ಕೆತ್ತಿಸುವ ಮೂಲಕ ಅವುಗಳನ್ನು ಶಾಶ್ವತಗೊಳಿಸಿದ್ದರು. ಅಲ್ಲದೆ, ಇವುಗಳನ್ನು ಶಿಲಾಮಂಟಪದಲ್ಲಿ ಪ್ರತಿಷ್ಠಾಪಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೆ, ಇಂಗಳೇಶ್ವರದಿಂದ ಶ್ರೀಕ್ಷೇತ್ರ ಉಳವಿಯವರೆಗೆ ಪಾದಯಾತ್ರೆ ನಡೆಸಿ, ವಚನ ಸಾರಗಳನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಬಿತ್ತುವ ಮಹತ್ವದ ಕಾರ್ಯವನ್ನು ಮಾಡಿದ್ದರು.
ಗಣ್ಯರ ಸಂತಾಪ
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಶ್ರೀಗಳು ಇಂದು ಇಹಲೋಕ ತ್ಯಜಿಸಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ, ಸಚಿವರಾದ ಎಂಬಿ ಪಾಟೀಲ್, ಶಿವಾನಂದ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.




