*ನೋಂದಣಿಗೆ RTOಗಳಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿದರೆ ನಿರ್ಧಾಕ್ಷಿಣ್ಯ ಕ್ರಮ: ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ರಾಜ್ಯದ ಯಾವುದೇ ಆರ್ ಟಿಒ ಕಛೇರಿಗಳಲ್ಲಿ ಐಷಾರಾಮಿ ಕಾರುಗಳ ನೋಂದಣಿಯಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ನಿಜವಾದ ವಾಹನದ ಮೌಲ್ಯವನ್ನು ಮರೆಮಾಚಿ ರಿಜಿಸ್ಟ್ರೇಷನ್ ಮಾಡಿರುವುದು, ಮಾಡುವುದು ಸರ್ಕಾರದ ಗಮನಕ್ಕೆ ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.
ಪರಿಷತ್ತಿನಲ್ಲಿ ಡಿ.17ರಂದು ಸದಸ್ಯರಾದ ಶರವಣ ಟಿ ಎ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆಗೆ ಪ್ರತಿಕ್ರಿಯಿಸಿದ ಸಚಿವರು, ಮಂಗಳೂರು ಮತ್ತು ಉಡುಪಿ ಆರ್.ಟಿ.ಒ ಕಛೇರಿಗಳಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಕಾರಿನ ನಿಜವಾದ ಮೌಲ್ಯವನ್ನು ಮರೆಮಾಚಿ, ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕಛೇರಿಯ ಕೇಂದ್ರ ಸ್ಥಾನೀಯ ಸಹಾಯಕರು, ಅಧೀಕ್ಷಕರು ಮತ್ತು ಪ್ರಥಮ ದರ್ಜೆ ಸಹಾಯಕರು ಹಾಗೂ ಉಡುಪಿ ಕಛೇರಿಯ ಅಧೀಕ್ಷಕರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಈ ಸಂಬಂಧ ಇಲಾಖಾ ವಿಚಾರಣೆ ಜಾರಿಯಲ್ಲಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೆÇಲೀಸರ ಪ್ರಸ್ತಾವನೆಯ ಮೇರೆಗೆ ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರುದ್ಧ ವಿಚಾರಣೆ, ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಕಲಂ 17(ಎ) ಅನ್ವಯ ಪೂರ್ವಾನುಮತಿಯನ್ನು ಸಹ ನೀಡಲಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.




