ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯ ಮಾಹಿತಿ ಹಕ್ಕು ಆಯೋಗದ ಬೆಳಗಾವಿ ಪೀಠದ ಕಲಾಪಗಳನ್ನು ಮಾರ್ಚ್ ನಲ್ಲಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಮಾಹಿತಿ ಆಯುಕ್ತರಾದ ಗೀತಾ ಬಿ.ವಿ. ತಿಳಿಸಿದರು.
ಮಾಹಿತಿ ಆಯೋಗದ ಪೀಠ ಸ್ಥಾಪನೆಗೆ ಗುರುತಿಸಲಾಗಿರುವ ಕಟ್ಟಡವನ್ನು ಸೋಮವಾರ(ಜ.೬) ಪರಿಶೀಲಿಸಿದ ಬಳಿಕ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಳಗಾವಿಯ ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿರುವ ತಮನ್ನಾ ಆರ್ಕೇಡ್ ನಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಪೀಠ ಸ್ಥಾಪಿಸಲು ನಿರ್ಧರಿಸಲಾಗಿದೆ.
ಪೀಠ ಆರಂಭಕ್ಕೆ ಅಗತ್ಯವಿರುವ ಪೀಠೋಪಕರಣ ಮತ್ತಿತರ ತುರ್ತು ಕಾಮಗಾರಿಗೆ ೬೯.೫೦ ಲಕ್ಷ ಅನುದಾನದ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನದ ಬಿಡುಗಡೆಯಾದ ತಕ್ಷಣ ಪೀಠದ ಕಲಾಪಗಳನ್ನು ಆರಂಭಿಸಲಾಗುವುದು.
ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ಇಲ್ಲೊಂದು ಪೀಠ ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಸುಮಾರು ಮೂರು ಸಾವಿರ ಪ್ರಕರಣಗಳು ನಡೆಯುತ್ತಿವೆ.
ಬೆಳಗಾವಿ ಪೀಠದಲ್ಲಿ ವ್ಯಾಪ್ತಿಯ ಬಗ್ಗೆ ಚರ್ಚೆ ನಡೆದಿದ್ದು, ಆರರಿಂದ ಎಂಟು ಜಿಲ್ಲೆಗಳ ವ್ಯಾಪ್ತಿ ನಿಗದಿ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಟ್ಟಡದ ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಅಗತ್ಯ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ- ಕ್ರಮಕ್ಕೆ ಅವಕಾಶ:
ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿ ಇಲ್ಲದೇ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸುವ ಹಾಗೂ ವಿನಾಕಾರಣ ಅರ್ಜಿ ಸಲ್ಲಿಸುವವರನ್ನು ಮತ್ತೆ ಅರ್ಜಿ ಸಲ್ಲಿಸದಂತೆ ನಿರ್ಬಂಧಿಸಲು ಅವಕಾಶವಿದೆ. ಕಾಯ್ದೆ ದುರ್ಬಳಕೆ ಮಾಡಿಕೊಳ್ಳುವರ ವಿರುದ್ಧ ಈ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ಆಯುಕ್ತರಾದ ಗೀತಾ ಬಿ.ವಿ. ತಿಳಿಸಿದರು.
ನೂತನ ಪೀಠದ ಕಟ್ಟಡ ಕುರಿತು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ.
ಆದಷ್ಟು ಬೇಗನೇ ಕಟ್ಟಡದ ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣ ಅಳವಡಿಕೆ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ