*ಬೆಳಗಾವಿ ಡಿಸಿ ವಿರುದ್ಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ದೂರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿ ಅವರ ವಿರುದ್ಧ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸುವಂತೆ ಮಹಾರಾಷ್ಟ್ರದ ಹಾಥಕಣಗಲೆ ಕ್ಷೇತ್ರದ ಸಂಸದ ಧೈರ್ಯಶೀಲ್ ಮಾನೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಐಎಎಸ್ ಅಧಿಕಾರಿ ಮೊಹಮ್ಮದ್ ರೋಷನ್ ಅವರ ವಿರುದ್ಧ ನವದೆಹಲಿಯಲ್ಲಿ ಓಂ ಬಿರ್ಲಾ ಅವರನ್ನು ಭೇಟಿ ಮಾಡಿರುವ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಅವರು ಈ ಬಗ್ಗೆ ಮನವಿ ಸಲ್ಲಿಸಿ,
ಎಂಇಎಸ್ ಮತ್ತು ಬೆಳಗಾವಿಯ ಮರಾಠಿ ಜನರು ಪ್ರತಿ ವರ್ಷ ಬೆಳಗಾವಿಯಲ್ಲಿ ನವೆಂಬರ್ 1ರಂದು ಕರಾಳ ದಿನವಾಗಿ ಆಚರಿಸುತ್ತಾರೆ, ಈ ದಿನದಂದು, ನಾನು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದಾಗ, ಬೆಳಗಾವಿ ಜಿಲ್ಲೆಯ ಜಿಲ್ಲಾ ಡಿಸಿ ಆಗಿರುವ ಐಎಎಸ್ ಮೊಹಮ್ಮದ್ ರೋಷನ್ ಅವರು ಕರ್ನಾಟಕ ಗಡಿಯಲ್ಲಿ ಅಕ್ರಮವಾಗಿ ನೋಟೀಸ್ ಹೊರಡಿಸಿ ನನ್ನನ್ನು ಗಡಿ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆದರು.
ದೇಶದ ಜನರನ್ನು ಪ್ರತಿನಿಧಿಸುತ್ತಿದ್ದರೂ, ಯಾವುದೇ ಕ್ರಿಮಿನಲ್ ದಾಖಲೆ ಇಲ್ಲದಿದ್ದರೂ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸದಂತೆ ನನ್ನನ್ನು ತಡೆಯುತ್ತಿರುವುದು ನ್ಯಾಯದ ದೃಷ್ಟಿಕೋನದಿಂದ ನನಗೆ ಅನ್ಯಾಯವಾಗಿದೆ.
ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಯಾಗಿರುವ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ವಿರುದ್ಧ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸುವ ಮೂಲಕ ಸಹಕರಿಸಬೇಕು ಎಂದು ಮನವಿಯಲ್ಲಿ ಬರೆದಿದ್ದಾರೆ.



