*ಡಿ. 27 ರಂದು ಬೆಳಗಾವಿ ಉತ್ಸವ: ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜನರಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ನೇತೃತ್ವದಲ್ಲಿ ಡಿಸೆಂಬರ್ 27ರಂದು ‘ಬೆಳಗಾವಿ ಉತ್ಸವ’ ಕಾರ್ಯಕ್ರಮ ನಗರದ ಸರ್ದಾರ್ ಮೈದಾನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಅಭಿಲಾಷ್ ತಿಳಿಸಿದರು.
ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಉತ್ಸವಕ್ಕೆ ಖ್ಯಾತ ಚಿತ್ರನಟ ಡಾಲಿ ಧನಂಜಯ, ವಶಿಷ್ಠ ಸಿಂಹ, ಚಿತ್ರನಟರಾದ ನಿನಾಸಂ ಸತೀಶ, ಕಾಂತಾರ ಚಿತ್ರನಟಿ ಸಪ್ತಮಿಗೌಡ ಭಾಗಿಯಾಗ್ತಾರೆ. ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ.
ಅಂದು ಮಧ್ಯಾಹ್ನ 12ಕ್ಕೆ ಚೆನ್ನಮ್ಮ ಪುತ್ಥಳಿಗೆ ಚಿತ್ರನಟ ಡಾಲಿ ಧನಂಜಯ ಮಾಲಾರ್ಪಣೆ ಮಾಡಲಿದ್ದಾರೆ. 50 ಸಾವಿರ ಜನರಿಗೆ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಉಚಿತ ಪ್ರವೇಶ, ಊಟದ ವ್ಯವಸ್ಥೆ ಇರುತ್ತದೆ.
ಬೆಳಗಾವಿ ಉತ್ಸವಕ್ಕೆ ಬರುವ ಹೆಣ್ಣುಮಕ್ಕಳಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಬೆಳಗಾವಿ ಉತ್ಸವ ಕಾರ್ಯಕ್ರಮ ನಡೆಯಲಿದೆ. ನಂತರ ಗಾಯಕ ರಾಜೇಶ ಕೃಷ್ಣನ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.




