Belagavi NewsBelgaum NewsKannada NewsKarnataka NewsLatest

*ಯುವಶಕ್ತಿಯ ಬಲದಿಂದ ಭಾರತ ವಿಶ್ವಗುರು: ಡಾ. ಮೀನಾ ಚಂದಾವರಕರ* *ನಟ ಸಚಿನ್ ಪಿಳಗಾಂವ್ಕರ್ ಬುಧವಾರ ಬೆಳಗಾವಿಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸರಿಯಾದ ಯೋಜನೆ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮತ್ತು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಶಿಕ್ಷಣದ ಮೂಲಕ ಬಿ.ಕೆ. ಮಾಡೆಲ್ ಹೈಸ್ಕೂಲ್ ಲಕ್ಷಾಂತರ ವಿದ್ಯಾರ್ಥಿಗಳನ್ನು ರೂಪಿಸಿದೆ. ಈ ಶಾಲೆಯ ವಿದ್ಯಾರ್ಥಿಗಳು ಜಗತ್ತಿನ ಮೂಲೆ ಮೂಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಯುವಶಕ್ತಿಯ ಬಲದಿಂದಲೇ ಭಾರತವು ವಿಶ್ವಗುರುವಾಗಲಿದೆ,” ಎಂದು ಖ್ಯಾತ ಶಿಕ್ಷಣತಜ್ಞೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಮೀನಾ ಚಂದಾವರಕರ ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಕೆ. ಮಾಡೆಲ್ ಹೈಸ್ಕೂಲ್‌ನ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಡಾ. ಮೀನಾ ಚಂದಾವರಕರ ಮಾತನಾಡಿ, “ಇಚ್ಛಾಶಕ್ತಿ, ಕಾರ್ಯಶಕ್ತಿ ಮತ್ತು ಜ್ಞಾನಶಕ್ತಿಯೊಂದಿಗೆ ಅಪಾರವಾದ ಉತ್ಸಾಹದ ಶಕ್ತಿ ಈ ಶಾಲೆಯ ಕಾರ್ಯದಲ್ಲಿ ಕಂಡುಬರುತ್ತದೆ. ಸರಿಯಾದ ವಾತಾವರಣವಿದ್ದಾಗ ಮಾತ್ರ ಮಳೆಬಿಲ್ಲು ಮೂಡಲು ಸಾಧ್ಯ. ಅದೇ ರೀತಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಅತ್ಯಗತ್ಯವಾಗಿದ್ದು, ಅಂತಹ ವಾತಾವರಣ ಈ ಶಾಲೆಯಲ್ಲಿದೆ. ಶಿಕ್ಷಣದ ಜೊತೆಗೆ ಸಮರ್ಥ ಭಾವಿ ಪೀಳ್ಯೆಯನ್ನು ರೂಪಿಸುವ ಕಾರ್ಯವನ್ನು ಈ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಮಾಡಿದ್ದಾರೆ,” ಎಂದರು.

ಮುಂದುವರಿದು ಮಾತನಾಡುತ್ತಾ, “ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಸಂಸ್ಥೆಯ ಶಾಲೆಗಳಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಮರಾಠಿ ಭಾಷೆಗಳಿಗೆ ಮಹತ್ವ ನೀಡುತ್ತಿರುವುದು ವಿಶೇಷವಾಗಿದೆ. ತ್ಯಾಗ, ಸಮರ್ಪಣೆ ಮತ್ತು ಪರಿಶ್ರಮದ ಮೂಲಕ ಶತಮಾನೋತ್ಸವದತ್ತ ಯಶಸ್ವಿ ಹಾದಿ ಸವೆಸಿದ ಶಾಲೆಯ ಶಿಕ್ಷಕರು ಹಾಗೂ ನಿರ್ದೇಶಕರನ್ನು ಅವರು ಶ್ಲಾಘಿಸಿದರು.

ಸಾಮಾಜಿಕ ಕಾರ್ಯಕರ್ತ ಹಾಗೂ ಸಾವಯವ ಕೃಷಿ ತಜ್ಞ ಕೆ.ಇ.ಎನ್. ರಾಘವನ್ ಸಹ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

Home add -Advt

ಕಾರ್ಯಕ್ರಮದ ಆರಂಭದಲ್ಲಿ ಶುಕ್ಲಾಂಬರ ಪತ್ತಾರ ಅವರಿಂದ ಸ್ವಾಗತ ಗೀತೆ ನೆರವೇರಿತು. ಶ್ರೀನಿವಾಸ ಶಿವಣಗಿ ಅವರು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರಾದ ಅವಿನಾಶ ಪೋತದಾರ ಅವರು ವಂದಿಸಿದರು.

ನಟ ಸಚಿನ್ ಪಿಳಗಾಂವ್ಕರ್ ಬುಧವಾರ ಬೆಳಗಾವಿಗೆ

ಬೆಳಗಾವಿ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ‘ಬೆಳಗಾವಿ ಎಜುಕೇಶನ್ ಸೊಸೈಟಿ’ಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಸಂಭ್ರಮ ಉತ್ತುಂಗಕ್ಕೇರಿದೆ. ಈ ಸಮಾರಂಭದ ವಿಶೇಷ ಆಕರ್ಷಣೆಯಾಗಿ ಬುಧವಾರ, ಡಿಸೆಂಬರ್ 24 ರಂದು ಭಾರತೀಯ ಚಿತ್ರರಂಗದ ಹಿರಿಯ ನಟ ಮತ್ತು ನಿರ್ದೇಶಕ ಸಚಿನ್ ಪಿಳಗಾಂವಕರ್ ಭಾಗವಹಿಸಲಿದ್ದಾರೆ. ಶಾಲೆಯ ಭವ್ಯ ಮೈದಾನದಲ್ಲಿ ಸಂಜೆ 5:30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸಚಿನ್ ಪಿಳಗಾಂವಕರ್  ಅವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ವಿಶೇಷವಾಗಿ ಚಲನಚಿತ್ರ ನಿರ್ದೇಶನ, ಚಿತ್ರರಂಗದಲ್ಲಿನ ವೃತ್ತಿಜೀವನದ ಅವಕಾಶಗಳು ಮತ್ತು ಮರಾಠಿ ಚಿತ್ರರಂಗದ ಇತ್ತೀಚಿನ ಗಮನಾರ್ಹ ಬೆಳವಣಿಗೆಗಳ ಬಗ್ಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಅಭಿನಯದ ಜೊತೆಗೆ ನಿರ್ದೇಶನ ಮತ್ತು ಸಂಗೀತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಸಚಿನ್ ಅವರು, ಚಿತ್ರರಂಗದ ತಾಂತ್ರಿಕ ಮತ್ತು ಸೃಜನಶೀಲ ಆಯಾಮಗಳ ಬಗ್ಗೆ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಲಿದ್ದಾರೆ.

ಬಿ.ಕೆ. ಮಾಡೆಲ್ ಹೈಸ್ಕೂಲ್ 100 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಏಳು ದಿನಗಳ ಮಹೋತ್ಸವದಲ್ಲಿ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ. ಸಚಿನ್ ಪಿಳಗಾಂವಕರ್ ಅವರಂತಹ ಅಷ್ಟಪೈಲು ವ್ಯಕ್ತಿತ್ವದ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ ಕಲಾ ಕ್ಷೇತ್ರದಲ್ಲಿನ ಹೊಸ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಶಾಲಾ ವ್ಯವಸ್ಥಾಪನಾ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ. ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಕಲಾ ಪ್ರೇಮಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಪೋತದಾರ್ ಮತ್ತು ಸಹೋದ್ಯೋಗಿಗಳು ವಿನಂತಿಸಿದ್ದಾರೆ.

ಕಿರು ಪರಿಚಯ: ಸಚಿನ್ ಪಿಳಗಾಂವಕರ್  ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ್ದು, ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದಾರೆ.

ಪ್ರಸಿದ್ಧ ಮರಾಠಿ ಚಿತ್ರಗಳು: ನವ್ರಿ ಮಿಳೆ ನವ್ರ್ಯಾಲಾ, ಅಶಿ ಹೀ ಬನವಾ ಬನವಿ, ಗಮ್ಮತ್ ಜಮ್ಮತ್, ಏಕಾ ಪೇಕ್ಷಾ ಏಕ್, ನವ್ರಾ ಮಾಝಾ ನವಸಾಚಾ ಮತ್ತು ಕಟ್ಯಾರ್ ಕಾಳ್ಜಾತ್ ಘುಸಲಿ.

ಪ್ರಸಿದ್ಧ ಹಿಂದಿ ಚಿತ್ರಗಳು: ಗೀತ್ ಗಾತಾ ಚಲ್, ಅಖಿಯೋಂ ಕೆ ಝರೋಖೋಂಸೆ, ನದಿಯಾ ಕೆ ಪಾರ್, ಶೋಲೆ ಮತ್ತು ಸತ್ತೆ ಪೆ ಸತ್ತಾ.

ಇವರಿಗೆ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿದ್ದು, ‘ಅಷ್ಟವಿನಾಯಕ’ ಮತ್ತು ‘ಕಟ್ಯಾರ್ ಕಾಳ್ಜಾತ್ ಘುಸಲಿ’ ಚಿತ್ರಗಳಿಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ. ಇದರೊಂದಿಗೆ ಹಲವಾರು ಚಿತ್ರಗಳ ನಿರ್ದೇಶನಕ್ಕಾಗಿ ಅವರು ವಿಶೇಷ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

Related Articles

Back to top button