*ಸಾಧನೆಯ ಹಿಂದಿನ ಶ್ರಮ ಯಾರಿಗೂ ಕಾಣುವುದಿಲ್ಲ: ನಟ ಸಚಿನ್ ಪಿಳಗಾಂವ್ಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ನಾನು ಬಡ ಕುಟುಂಬದಲ್ಲಿ ಜನಿಸಿದೆ. ಬಾಲ್ಯದಲ್ಲಿಯೇ ಮನೆಯ ಜವಾಬ್ದಾರಿಯನ್ನು ಹೊರುವ ನಿರ್ಧಾರ ಕೈಗೊಂಡೆ. ಈ ಕಾರಣದಿಂದಾಗಿ ನನಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಶಿಕ್ಷಣ ಒಮ್ಮೆ ಕೈತಪ್ಪಿದರೆ ಮತ್ತೆ ಸಿಗುವುದಿಲ್ಲ ಎಂಬುದು ಪ್ರತಿಯೊಬ್ಬರಿಗೂ ನೆನಪಿರಲಿ. ಜೀವನದಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ಕಲಿಯಲು ಪ್ರಯತ್ನಿಸಬೇಕು,” ಎಂದು ಹಿರಿಯ ನಟ ಸಚಿನ್ ಪಿಳಗಾಂವ್ಕರ್ ಹೇಳಿದರು.
ಕ್ಯಾಂಪ್ ಪ್ರದೇಶದ ಬಿ.ಕೆ. ಮಾಡೆಲ್ ಹೈಸ್ಕೂಲ್‌ನ ಶತಮಾನೋತ್ಸವ ಸಪ್ತಾಹದ ಅಂಗವಾಗಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿನ್ ಪಿಳಗಾಂವ್ಕರ್ ಮಾತನಾಡಿದರು.
“ಸ್ತ್ರೀಯು ಪುರುಷನಿಗಿಂತ ಯಾವಾಗಲೂ ಎಲ್ಲ ಅರ್ಥದಲ್ಲೂ ಶ್ರೇಷ್ಠಳಾಗಿದ್ದಾಳೆ. ಆದ್ದರಿಂದ ಪೋಷಕರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ನನ್ನ ಬಾಲ್ಯ ಬಡತನದಲ್ಲಿ ಕಳೆಯಿತು. ನಾಲ್ಕನೇ ವಯಸ್ಸಿನಲ್ಲಿಯೇ ಅಭಿನಯ ಆರಂಭಿಸಿದೆ. ಐದನೇ ವಯಸ್ಸಿನಲ್ಲಿ ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿತು. ಆರನೇ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಹೊತ್ತು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದೆ. ಇದರಿಂದಾಗಿ ಶಿಕ್ಷಣದ ಕಡೆಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆದರೆ ಆ ಸಮಯದಲ್ಲಿ ನನ್ನ ಶಿಕ್ಷಕರೇ ನನ್ನ ಶಿಕ್ಷಣಕ್ಕಾಗಿ ಬಹಳ ಶ್ರಮವಹಿಸಿದ್ದರು. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ,” ಎಂದು ತಿಳಿಸಿದರು.
ಮುಂದುವರಿದು ಮಾತನಾಡುತ್ತಾ, “ಜನರಿಗೆ ಚಿತ್ರರಂಗದ ಆಕರ್ಷಣೆ ಮಾತ್ರ ಕಾಣಿಸುತ್ತದೆ. ಆದರೆ ಈ ಹೊಳೆಯುವ ಪ್ರಪಂಚದ ಹಿಂದಿರುವ ಕಷ್ಟ ಮತ್ತು ಪರಿಶ್ರಮ ಯಾರಿಗೂ ಕಾಣುವುದಿಲ್ಲ. ಜನಪ್ರಿಯತೆ ಅಥವಾ ಪ್ರಸಿದ್ಧಿ ಪಡೆಯಲು ಕಠಿಣ ಪರಿಶ್ರಮದ ಅಗತ್ಯವಿದೆ. ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ನಾನು ಸದಾ ಹೊಸತನ್ನು ಕಲಿಯಲು ಪ್ರಯತ್ನಿಸುತ್ತಿದ್ದೆ. ಮೀನಾಕುಮಾರಿ ಅವರಿಂದಾಗಿ ನನಗೆ ಉರ್ದು ಭಾಷೆ ಕಲಿಯಲು ಸಾಧ್ಯವಾಯಿತು. ಭಾಷೆಗಳ ಮೇಲೆ ನನಗೆ ಯಾವಾಗಲೂ ವಿಶೇಷ ಪ್ರೇಮವಿದೆ. ಮನುಷ್ಯ ಸಾಯುವವರೆಗೂ ಕಲಿಯುತ್ತಿರಬೇಕು ಎಂದರು.
ನನಗೆ 18ನೇ ವಯಸ್ಸಿನಲ್ಲಿ (1975ರಲ್ಲಿ) ‘ಶೋಲೆ’ ಮತ್ತು ‘ಗೀತ್ ಗಾತಾ ಚಲ್’ ಎಂಬ ಎರಡು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಎರಡೂ ಚಿತ್ರಗಳು ಭರ್ಜರಿ ಯಶಸ್ಸು ಕಂಡವು. ತದನಂತರ ಸಾಲು ಸಾಲು ಸಿನಿಮಾಗಳ ಆಫರ್‌ಗಳು ಬಂದವು ಮತ್ತು ಚಿತ್ರರಂಗದಲ್ಲಿ ಸತತ ಯಶಸ್ಸು ದೊರೆಯಿತು. ಯಶಸ್ಸು ಸಿಕ್ಕಿದರೂ ಸಹ ಕೆಲವು ಬಾರಿ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಕೊರಗು ನನಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಆಯಾ ವಯಸ್ಸಿನಲ್ಲಿ ಮಾಡಬೇಕಾದ ಕೆಲಸಗಳನ್ನು (ಶಿಕ್ಷಣವನ್ನು) ಮಾಡುತ್ತಿರಬೇಕು,” ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ‘ಶೋಲೆ’ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ತಮ್ಮ ಸಾವಿನ ದೃಶ್ಯದ ಚಿತ್ರೀಕರಣದ ಕೌತುಕದ ಕಥೆಯನ್ನು ಹಂಚಿಕೊಂಡರು.
ಶಾಸಕ ರಾಜು ಸೇಠ್ ಮಾತನಾಡಿ, “ಶಾಲೆಯ ಶತಮಾನೋತ್ಸವ ಆಚರಿಸುವುದು ಸಾಮಾನ್ಯ ವಿಷಯವಲ್ಲ. ಈ ಶಾಲೆಯ ಸ್ಥಾಪನೆಯ ಸಮಯದಲ್ಲಿ ಸ್ಥಾಪಕರು ಎಷ್ಟೋ ಸಂಕಷ್ಟಗಳನ್ನು ಎದುರಿಸಿರಬಹುದು. ಇದನ್ನು ಗಮನಿಸಿದರೆ ಶತಮಾನೋತ್ಸವದ ಸಾಧನೆ ಅತಿ ದೊಡ್ಡದು. ಬಾಲ್ಯದ ಸ್ನೇಹವೇ ನಿಜವಾದ ಸ್ನೇಹ. ಶಿಕ್ಷಕರು ಕೇವಲ ಶಿಕ್ಷಣ ನೀಡುವುದಿಲ್ಲ, ಬದಲಾಗಿ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮಾಡುತ್ತಾರೆ,” ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅವಿನಾಶ್ ಪೋತದಾರ ಸ್ವಾಗತಿಸಿದರು.
ಬಿ.ಕೆ. ಮಾಡೆಲ್ ಹೈಸ್ಕೂಲ್ ಕಾರ್ಯಕ್ರಮದಲ್ಲಿ ನಾಳೆ ಡಾ. ಗಿರೀಶ್ ಓಕ್ ಭಾಗಿ

ಬೆಳಗಾವಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿ.ಕೆ. ಮಾಡೆಲ್ ಹೈಸ್ಕೂಲ್‌ನ ಶತಮಾನೋತ್ಸವ ಸಮಾರಂಭದಲ್ಲಿ ಗುರುವಾರ, ಡಿಸೆಂಬರ್ 25 ರಂದು ಮರಾಠಿ ಚಿತ್ರರಂಗ, ನಾಟಕ ಮತ್ತು ಕಿರುತೆರೆಯ ಖ್ಯಾತ ನಟ ಡಾ. ಗಿರೀಶ್ ಓಕ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರ ವಿಶೇಷ ಉಪಸ್ಥಿತಿಯು ವಿದ್ಯಾರ್ಥಿಗಳಿಗೆ ಮತ್ತು ಪ್ರೇಕ್ಷಕರಿಗೆ ಸ್ಫೂರ್ತಿದಾಯಕ ಅನುಭವವನ್ನು ನೀಡಲಿದೆ.


