*ವರದಕ್ಷಿಣೆ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆ ಚಿಕಿತ್ಸೆ ಫಲಿಸದೇ ಸಾವು*

ಪ್ರಗತಿವಾಹಿನಿ ಸುದ್ದಿ: ವರದಕ್ಷಿಣೆ ಕಿರುಕುಳ, ಪತಿಯ ಅವಮಾನದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಈ ಘಟನೆ ನಡೆದಿದೆ. ಗಾನವಿ ಮೃತ ನವವಿವಾಹಿತೆ. 58 ದಿನಗಳ ಹಿಂದಷ್ಟೇ ಗಾನವಿ ಸೂರಜ್ ಎಂಬಾತನ ಜೊತೆ ವಿವಾಹವಾಗಿತ್ತು. ಎರಡೂ ಕುಟುಂಬಗಳು ನೋಡಿಯೇ ಮಾಡಿದ್ದ ಮದುವೆ. ಸೂರಜ್ ಕುಟುಂಬದವರ ಬೇಡಿಕೆಯಂತೆ ನವೆಂಬರ್ 23ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನೆರವೇರಿತ್ತು. ಮದುವೆಯಲ್ಲಿಯೂ ಭಾರಿ ವರದಕ್ಷಿಣೆ, ಚಿನ್ನಾಭರಣ ನೀಡಲಾಗಿತ್ತು. ಮದುವೆ ಬಳಿಕ 10 ದಿನಗಳಕಾಲ ನವದಂಪತಿ ಗಾನವಿ ಹಾಗೂ ಸೂರಜ್ ಶ್ರೀಲಂಕಾಗೆ ಹನಿಮೂನ್ ಗೆ ಹೋಗಿದ್ದರು.
ಹೋಗೆ ಹನಿಮೂನ್ ಗೆ ಪತ್ನಿಯನ್ನು ಕರೆದೊಯ್ದಿದ್ದ ಸೂರಜ್, ಅಲ್ಲಿಯೂ ವರದಕ್ಷಿಣೆಗಾಗಿ ಪತ್ನಿಗೆ ಬೇಡಿಕೆ ಇಟ್ಟಿದ್ದಾನೆ. ಪತಿ-ಪತ್ನಿ ನಡುವೆ ಗಲಾಟೆಯಾಗಿದೆ. ಇದರಿಂದ ಹನಿಮೂನ್ ಟ್ರಿಪ್ ಅರ್ಧಕ್ಕೆ ನಿಲ್ಲಿಸಿ ಐದೇ ದಿನಕ್ಕೆ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಹನಿಮೂನ್ ಟ್ರಿಪ್ ನಿಂದ ಅರ್ಧಕ್ಕೆ ಯಾಕೆ ಬಂದಿರಿ? ಏನಾಯಿತು? ಎಂದು ಗಾನವಿ ಪೋಷಕರು ಕೇಳುತ್ತಿದ್ದಂತೆ ಸೂರಜ್ ಅತ್ತೆ-ಮಾವನ ಮುಂದೆಯೂ ತನ್ನ ನಿಜ ವರಸೆ ತೋರಿಸಿದ್ದಾನೆ. ವರದಕ್ಷಿಣೆ ಸಾಕಷ್ಟು ನೀಡಿಲ್ಲ ಎಂದು ಗಲಾಟೆ ಮಾಡಿದ್ದಾನೆ. ಅಲ್ಲದೇ ನಿಮ್ಮ ಮಗಳನ್ನು ಕರೆದೊಯ್ಯಿರಿ ಎಂದು ಆವಾಜ್ ಹಾಕಿದ್ದಾನೆ.
ಪತಿ ಸೂರಜ್ ವರ್ತನೆ, ವರದಕ್ಷಿಣೆ ಕಿರುಕುಳಕ್ಕೆ ನೊಂದ ಗಾನವಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಾನವಿ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗಾನವಿ ಕೊನೆಗೂ ಕೊನೆಯುಸಿರೆಳೆದಿದ್ದಾಳೆ.
ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಜೀವ ಕಮರಿಹೋಗಿದೆ. ವರದಕ್ಷಿಣೆ ಕಿರುಕುಳ, ಆತ್ಮಹತ್ಯೆ ಪ್ರಚೋದನೆ ಹಿನ್ನೆಲೆಯಲ್ಲಿ ಪತಿ ಸೂರಜ್, ಅತ್ತೆ ಹಾಗೂ ಭಾವನ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



