Belagavi NewsBelgaum NewsKannada NewsKarnataka News

*ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಓದುವ ಹವ್ಯಾಸ ಕಡಿಮೆ: ಡಾ. ಗುರುದೇವಿ ಹುಲೆಪ್ಪನವರಮಠ ವಿಷಾದ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಓದುವ ಹವ್ಯಾಸ ಯುವಕರಲ್ಲಿ ಕಡಿಮೆಯಾಗುತ್ತಿರುವುದು ಅತ್ಯಂತ ಖೇದಕರ ಎಂದು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ವಿಷಾದ ವ್ಯಕ್ತಪಡಿಸಿದರು. 

ಅವರಿಂದು ಬೆಳಗಾವಿಯಲ್ಲಿ ಬಸವರಾಜು ಕಟ್ಟಿಮನಿ ಪ್ರತಿಷ್ಠಾನ, ಡಾ. ಬೆಟಗೇರಿ ಕೃಷ್ಣ ಶರ್ಮ ಸ್ಮಾರಕ ಟ್ರಸ್ಟ್ ಇವರುಗಳ ಸಹಕಾರದೊಂದಿಗೆ “ನಾನು ನಮ್ಮವರೊಂದಿಗೆ ಫೌಂಡೇಶನ್” ನವರು ಆಯೋಜಿಸಿದ್ದ ಕಟ್ಟಿಮನಿ ಕಥಾ- ಕಥನ ಹಾಗೂ ಬೆಟಗೇರಿ ಗೀ-ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದೆಲ್ಲ ಕಥೆಗಳನ್ನು ಕಾದಂಬರಿಗಳನ್ನು ಓದುವ ಮತ್ತು ಕಥೆ ಹೇಳುವ ಕಥೆ ಕೇಳುವ ವಾತಾವರಣವಿತ್ತು ಇಂದು ಮಾಧ್ಯಮಗಳಿಂದಾಗಿ ಯುವಜನರು ಕಥೆಗಳನ್ನು ಕಾದಂಬರಿಗಳನ್ನು ಓದುವ ಹವ್ಯಾಸದಿಂದ ದೂರ ಹೋಗುತ್ತಿರುವುದು ಅತ್ಯಂತ ವಿಷಾಧದ ಸಂಗತಿ. ಬಸವರಾಜ ಕಟ್ಟಿಮನಿ ಅಂತಹವರ ಮನಮುಟ್ಟುವಂಥ ಸಾಹಿತ್ಯ ಮತ್ತು ಜನಪದವೆಂದರೆ ಕೃಷ್ಣಶರ್ಮ ಕೃಷ್ಣಶರ್ಮ ಎಂದರೆ ಜನಪದ ಎನ್ನುವಷ್ಟರ ಮಟ್ಟಿಗೆ ಜನಪದ ಸಾಹಿತ್ಯವನ್ನು ರಚಿಸಿದ ಬೆಟಗೇರಿ ಕೃಷ್ಣಶರ್ಮ ಅಂಥವರ ಸಾಹಿತ್ಯವನ್ನು ಯುವಜನತೆಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದರು. 

ಜರತಾರಿ ಜಗದ್ಗುರು ಎಂಬ ಕಾದಂಬರಿಯಿಂದ ಖ್ಯಾತರಾದ ಬಸವರಾಜ ಕಟ್ಟಿಮನಿ ಬಡತನವನ್ನೇ ಅಪ್ಪಿ ಬಡತನವನ್ನೇ ಒಪ್ಪಿ ನಿಷ್ಟೂರ ಪತ್ರಕರ್ತರಾಗಿ, ಶ್ರೇಷ್ಠ ಸಾಹಿತಿಯಾಗಿ ಅವರು ರಚಿಸಿದ ಸಾಹಿತ್ಯ ಅದ್ವಿತೀಯವಾದದ್ದು ಅದೇ ರೀತಿ ಬೆಟಗೇರಿ ಕೃಷ್ಣಶರ್ಮ ಅವರು  ಜನಪದರ ಸರಳ ಭಾಷೆಯಲ್ಲಿ ರಚಿಸಿದ ಕವನಗಳು ಅದ್ವಿತೀಯವಾದವು ಅವನ್ನು ಯುವ ಜನತೆಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಸದಸ್ಯ ಡಾ.ಎಚ್.ಬಿ. ಕೋಲ್ಕಾರ್ ಮಾತನಾಡಿ ಕೃಷ್ಣಶರ್ಮರ 16 ಕವನ ಸಂಕಲನಗಳ ಪೈಕಿ 9 ರಾಷ್ಟ್ರಭಕ್ತಿಗೆ ಸಂಬಂಧಿಸಿದವುಗಳಾಗಿವೆ  ರಾಷ್ಟ್ರೀಯವಾದದ ನೆಲೆಯಲ್ಲಿ ಕನ್ನಡತನ ಕಟ್ಟಿದವರು. ಅವರ ಜೀವನ ಸಂಸ್ಕೃತಿ ಬಿಂಬಿಸುವ ಜನಪದ ಸಾಹಿತ್ಯ ಗ್ರಾಮ್ಯ ಬದುಕಿನ ಸಂಸ್ಕೃತಿಯನ್ನು ಬಿಂಬಿಸುವಂಥದ್ದು, ಶಿಷ್ಟ ಬರಹಗಾರರಿಂದ ಉಪೇಕ್ಷಿಸಲ್ಪಟ್ಟ ಗ್ರಾಮ್ಯ ಸಂಸ್ಕೃತಿಗೆ ಕೃಷ್ಣಶರ್ಮರ ಬರಹದಿಂದ ಪ್ರಾಧಾನ್ಯತೆ ಸಿಕ್ಕಿತು, ಅಪ್ಪಟ ಜನಪದದಿಂದಲೇ ಖ್ಯಾತಿ ಪಡೆದ ನಲ್ವಾಡುಗಳನ್ನು ಹಾಡಿ ಪ್ರಸಿದ್ಧಿ ಪಡೆದ ಗಾಯಕರು ಎಂದರೆ ಹುಕ್ಕೇರಿ ಬಾಳಪ್ಪನವರು ಎಂದರು.

Home add -Advt

ಟ್ರಸ್ಟ್ ನ ಮತ್ತೊಬ್ಬ ಸದಸ್ಯೆ ಡಾ. ಗೀತಾಂಜಲಿ‌ ಕುರಡಗಿ ಮಾತನಾಡಿ ಬೆಟಗೇರಿ ಕೃಷ್ಣ ಶರ್ಮ ಮತ್ತು ಬಸವರಾಜ್ ಕಟ್ಟಿಮನಿ ಹೆಸರಿನಲ್ಲಿ ಡಿಗ್ರಿ ಕಾಲೇಜುಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಅದೇ ರೀತಿ ಫೆಲೋಶಿಪ್ ನೀಡಲಾಗುತ್ತಿದೆ ಈ ವರ್ಷ ಇಬ್ಬರಿಗೆ ಫೆಲೋಶಿಪ್ ನೀಡಲಾಗಿದೆ ಶಾಲಾ-ಕಾಲೇಜುಗಳಲ್ಲಿ ಈ ಸಾಹಿತಿಗಳ ಗೀತ-ಗಾಯನ ಸ್ಪರ್ಧೆ ಮುಂತಾದವುಗಳನ್ನು ನಡೆಸಲಾಗುತ್ತಿದೆ ಯುವಜನತೆಗೆ ಈ ಸಾಹಿತ್ಯವನ್ನು ತಲುಪಿಸುವ ಕಾರ್ಯ ಟ್ರಸ್ಟ್ ದಿಂದ ನಡೆಯುತ್ತಿದೆ ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಸವರಾಜ್ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಅವರು ಮಾತನಾಡಿ ಬಸವರಾಜ ಕಟ್ಟಿಮನಿ ಮತ್ತು ಬೆಟಗೇರಿ ಕೃಷ್ಣಶರ್ಮ ಇಬ್ಬರೂ ಸಾಹಿತಿಗಳು ಸ್ತ್ರೀ ವಾದದ ಬಗ್ಗೆ ಬರೆದವರು. ಸ್ತ್ರೀಯರಿಂದ ಸಮಾಜ ಸುಧಾರಣೆ ಸಾಧ್ಯ ಎಂದು ನಂಬಿದವರು ಮತ್ತು ತಮ್ಮ ಸಾಹಿತ್ಯದಲ್ಲಿ ಅದನ್ನೇ ಬಿಂಬಿಸಿದವರು ಕಟ್ಟಿಮನಿಯವರು ಕೇವಲ ಬರಹಗಾರರಲ್ಲ ಅವರು ಹೋರಾಟಗಾರರು ಹೌದು. ಕುವೆಂಪು ಅವರ ನಂತರ ಬಸವರಾಜ್ ಕಟ್ಟಿಮನಿ ಕೂಡ ಸಾಹಿತಿಗಳ ದೊಡ್ಡ ತಂಡವನ್ನು ಕಟ್ಟಿ ಬೆಳೆಸಿದವರು. ಮೊಬೈಲ್ ಗೀಳಿನಲ್ಲಿ ಮುಳುಗಿದ ಯುವ ಜನರಿಗಾಗಿ ಕಟ್ಟಿಮನಿ ಕತೆ ಹೇಳುವ ಸ್ಪರ್ಧೆಯನ್ನು ಬಹಳಷ್ಟು ಕಾಲೇಜುಗಳಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದರು. 

“ನಾನು ನಮ್ಮವರೊಂದಿಗೆ ಫೌಂಡೇಶನ್” ಅಧ್ಯಕ್ಷೆ ಶ್ರೀಮತಿ ಸರ್ವಮಂಗಳಾ ಅರಳಿಮಟ್ಟಿ ಅವರು ಆಶಯ ನುಡಿಗಳನ್ನಾಡಿ ತಮ್ಮ ಫೌಂಡೇಶನ್ ನಡೆದು ಬಂದ ದಾರಿಯನ್ನು ವಿವರಿಸಿದರು.

ಭಾಗ್ಯಶ್ರೀ ಭೈರಪ್ಪನವರ್ ಸ್ವಾಗತಿಸಿದರು. ಭವ್ಯಾ ಸಂಪಗಾರ್ ಕಾರ್ಯಕ್ರಮ ನಿರ್ವಹಿಸಿದರು. ಬೆಂಗಳೂರಿನ ಹಿರಿಯ ಸಾಹಿತಿ ಸಿದ್ದಗಂಗಮ್ಮ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಸವರಾಜ್ ಕಟ್ಟಿಮನಿಯವರ ಕಥೆಗಳನ್ನು 10 ಜನ ಮಹಿಳಾ ಸಾಹಿತಿಗಳು ಪ್ರಸ್ತುತಪಡಿಸಿದರು. ಅದೇ ರೀತಿ ಬೆಟಗೇರಿ ಕೃಷ್ಣ ಶರ್ಮ ಅವರ ನಲ್ವಾಡುಗಳನ್ನು 12 ಜನ ಕಲಾವಿದರು ಹಾಡಿ ಮನರಂಜಿಸಿದರು.

Related Articles

Back to top button