Kannada NewsKarnataka NewsNationalPolitics

*ರಾಜ್ಯದ ಆಡಳಿತದಲ್ಲಿ ಕೆ.ಸಿ. ವೇಣುಗೋಪಾಲ್ ಅವರು ಹಸ್ತಕ್ಷೇಪ ಮಾಡಿಲ್ಲ: ಡಿಸಿಎಂ ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: “ಕೋಗಿಲು ಬಡಾವಣೆ ತ್ಯಾಜ್ಯ ವಿಲೇವಾರಿ ಜಾಗದ ಅಕ್ರಮ ಒತ್ತುವರಿ ಪ್ರಕರಣದಲ್ಲಿ ನಿರಾಶ್ರಿತರಾಗಿರುವ ಅರ್ಹರು ಹಾಗೂ ಸ್ಥಳೀಯರಿಗೆ ಪುನರ್ವಸತಿ ಕಲ್ಪಿಸಲಾಗುವುದು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.

ಕೋಗಿಲು ಅಕ್ರಮ ಮನೆ ತೆರವು ಸಂಬಂಧ ವೇಣುಗೋಪಾಲ್ ಅವರ ಟ್ವೀಟ್ ವಿಚಾರವಾಗಿ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ವೇಣುಗೋಪಾಲ್ ಅವರು ನಮ್ಮ ಆಡಳಿತದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ವೇಣುಗೋಪಾಲ್ ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದು, ನಮಗೆ ಸಲಹೆ ನೀಡಲು ಅವರಿಗೆ ಎಲ್ಲಾ ಅಧಿಕಾರ ಇದೆ. ಬಿಜೆಪಿ ರಾಷ್ಟ್ರೀಯ ನಾಯಕರು ಬಂದು ರಾಜ್ಯ ನಾಯಕರಿಗೆ ಸಲಹೆ ನೀಡುವುದಿಲ್ಲವೇ? ನಮ್ಮದು ರಾಷ್ಟ್ರೀಯ ಪಕ್ಷ, ನಮಗೆ ನಮ್ಮದೇ ಜವಾಬ್ದಾರಿ ಇದೆ. ನಾವು ಜಾತಿ, ಧರ್ಮದ ಮೇಲೆ ಹೋಗುವುದಿಲ್ಲ. ಅಲ್ಲಿ ಅಕ್ರಮವಾಗಿ ಶೆಡ್ ಹಾಕಿಕೊಂಡವರಲ್ಲಿ ಯಾವ ಸಮುದಾಯದವರು ಎಷ್ಟಿದ್ದರು ಎಂಬ ಮಾಹಿತಿ ತರಿಸಿದ್ದೇನೆ. ಕಾನೂನು ಎಲ್ಲರಿಗೂ ಒಂದೇ. ಸಿಎಂ ನಾಳೆ ಈ ವಿಚಾರವಾಗಿ ಸಭೆ ಕರೆದಿದ್ದಾರೆ. ಈ ಪ್ರಕರಣದ ಬಗ್ಗೆ ನಾನು ಪರಿಶೀಲನೆ ಮಾಡಿದ್ದು, ವ್ಯಕ್ತಿಯೊಬ್ಬ ಜನರಿಂದ ಹಣ ಸಂಗ್ರಹಿಸಿ ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿಕೊಳ್ಳಲು ಹೇಳಿದ್ದಾನೆ” ಎಂದರು.

ವೇಣುಗೋಪಾಲ್ ಅವರು ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಪಕ್ಷದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಹೀಗಾಗಿ ಸುದ್ದಿಯಲ್ಲಿರಲು ಕೆಲವರು ಹೇಳಿಕೆ ನೀಡುತ್ತಾರೆ. ನೀವುಗಳು ಅವರಿಗೆ ಗೌರವ ಕೊಡುತ್ತೀರಲ್ಲಾ ಅದಕ್ಕೆ ಅವರು ನಿತ್ಯ ಒಂದೊಂದು ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ” ಎಂದರು.

Home add -Advt

Related Articles

Back to top button