
ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆ ಓರ್ವ ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಕಾರಣವಾಗಿದೆ.
ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಗಲಾಟೆಯಾಗಿ ಫೈರಿಂಗ್ ನಡೆದಿದೆ. ಈ ವೇಳೆ ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿಯ ಆಪ್ತ ರಾಜಶೇಖರ್(28) ಮೃತ ಪಟ್ಟಿದ್ದಾರೆ.
ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಹಾಗೂ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರ ನಡುವೆ ಭಾರೀ ಘರ್ಷಣೆ ನಡೆದಿದೆ. ಸಾವಿರಾರು ಕಾರ್ಯಕರ್ತರು ಸೇರಿದ್ದ ಈ ಸಂಘರ್ಷದಲ್ಲಿ, ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿಯ ಅಂಗರಕ್ಷಕರು ಗುಂಡು ಹಾರಿಸಿದ ಘಟನೆ ನಡೆದಿದೆ.
ಪರಿಸ್ಥಿತಿ ಕೈಮೀರಿದ ಹಿನ್ನೆಲೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಈ ಗಲಾಟೆಯ ವೇಳೆ ಒಬ್ಬರು ಗುಂಡೇಟಿಗೆ ಬಲಿಯಾಗಿದ್ದು, ಆ ಗುಂಡು ಯಾರಿಂದ ಬಂದಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನು ಈ ಘಟನೆಯ ಬಗ್ಗೆ ಗಾಲಿ ಜನಾರ್ಧನ ರೆಡ್ಡಿ ಪ್ರತಿಕ್ರಿಯಿಸಿದ್ದು, ನಾನು ನನ್ನ ಕ್ಷೇತ್ರದ ಕೆಲಸದ ನಿಮಿತ್ತ ಹೊರಗೆ ಹೋಗಿದ್ದೆ. ನಾನು ಇಲ್ಲದ ವೇಳೆ ಭರತ್ ರೆಡ್ಡಿ ಅವರ ಬೆಂಬಲಿಗರು ನನ್ನ ಮನೆಯ ಮುಂದೆ ಕುರ್ಚಿಗಳನ್ನು ಹಾಕಿಕೊಂಡು ಗಲಾಟೆ ನಡೆಸಿದ್ದಾರೆ.
ಈ ವಿಷಯ ನನಗೆ ತಿಳಿದ ತಕ್ಷಣ ನಾನು ಶ್ರೀರಾಮುಲು ಅವರಿಗೆ ಮಾಹಿತಿ ನೀಡಿದ್ದೆ. ನಂತರ ಅವರು ಪೊಲೀಸರ ಸಮ್ಮುಖದಲ್ಲೇ ಈ ವಿಚಾರವನ್ನು ಪ್ರಶ್ನಿಸಿದಾಗ, ಅದರಿಂದ ಪರಿಸ್ಥಿತಿ ಮತ್ತಷ್ಟು ಉದ್ರಿಕ್ತಗೊಂಡು ಗಲಾಟೆ ನಡೆದಿದೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
ನಾನು ಕಾರಿನಿಂದ ಇಳಿದ ಕ್ಷಣದಲ್ಲೇ ಸತೀಶ್ ರೆಡ್ಡಿ ಅವರ ಅಂಗರಕ್ಷಕರು ನಾಲ್ಕು ಸುತ್ತು ಗುಂಡು ಹಾರಿಸಿದರು. ನನ್ನ ಜೀವಕ್ಕೆ ಅಪಾಯ ಉಂಟುಮಾಡುವ ಉದ್ದೇಶದಿಂದಲೇ ಈ ಗಲಾಟೆ ನಡೆದಿದ್ದು, ಹತ್ಯೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.
ಘಟನೆ ಬಗ್ಗೆ ಗೃಹಸಚಿವ ಡಾ. ಜಿ ಪರಮೇಶ್ವರ್ ಶಾಸಕ ಭರತ್ ರೆಡ್ಡಿಯಿಂದ ಮಾಹಿತಿ ಪಡೆದು ಕೊಂಡಿದ್ದಾರೆ. ಇನ್ನು ಪರಿಸ್ಥಿತಿ ಸುಧಾರಿಸದ ಹಿನ್ನೆಲೆ ಘಟನಾ ಸ್ಥಳದ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಜನಾರ್ದನ ರೆಡ್ಡಿ ಬಂಧಿಸುವಂತೆ ಅವರ ನಿವಾಸದೆದುರೇ ಶಾಸಕ ಭರತ್ ರೆಡ್ಡಿ ಠಿಕಾಣಿ ಹೂಡಿದ್ದರೆ, ಇತ್ತ ಶ್ರೀರಾಮುಲು ರೆಡ್ಡಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆ.
ಘಟನೆ ಸಂಬಂಧ ಶಾಸಕ ಜನಾರ್ದನರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಅಲಿಖಾನ್, ದಮ್ಮೂರ ಶೇಖರ್ ಸೇರಿ 11 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.


