*ರಾಜೀ ಸಂಧಾನಕ್ಕೆ ಅವಕಾಶವಿಲ್ಲ, ಕಾನೂನು ಎಲ್ಲರಿಗೂ ಒಂದೆ: ಬೆಳಗಾವಿ ನೂತನ ಎಸ್ ಪಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೇ ಕಾರಣಕ್ಕೂ ರಾಜೀ ಸಂಧಾನಕ್ಕೆ ಅವಕಾಶ ಕೊಡೊದಿಲ್ಲ. ಎಫ್ಐಆರ್ ಮಾಡದೇ ರಾಜೀ ಪಂಚಾಯತ್ ಮಾಡಲು ನನ್ನ ಅವಧಿಯಲ್ಲಿ ಅವಕಾಶವಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಬೆಳಗಾವಿ ನೂತನ ಎಸ್ ಪಿ ಕೆ ರಾಮರಾಜನ್ ಹೇಳಿದ್ದಾರೆ.
ಸಿಐಡಿ ಡಿಐಜಿಪಿಯಾಗಿ ವರ್ಗಾವಣೆಗೊಂಡ ಹಿಂದಿನ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಸ್ಥಾನಕ್ಕೆ ಕೆ ರಾಮರಾಜನ್ ಅಧಿಕಾರ ಸ್ವೀಕಾರ ಮಾಡಿದರು. ಬೆಳಗಾವಿ ಎಸ್ಪಿ ಕಚೇರಿಯಲ್ಲಿ ನೂತನ ಎಸ್ಪಿಯಾಗಿ ಅಧಿಕಾರ ಕೆ.ರಾಮರಾಜನ್ ಅವರು ವಹಿಸಿಕೊಂಡರು. ಕೊಡುಗು ಜಿಲ್ಲಾ ಎಸ್ಪಿಯಾಗಿ ಕೆ ರಾಮರಾಜನ್ ಅವರು ಸೇವೆ ಸಲ್ಲಿಸಿದ್ದಾರೆ.

ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಐಪಿಎಸ್ ತರಬೇತಿ ಅವಧಿಯಲ್ಲಿ ಐದು ದಿನಗಳ ಕಾಲ ಬೆಳಗಾವಿಯಲ್ಲಿ ಕಳೆದಿದ್ದೇನೆ. ನನ್ನ ಟೀಮ್ ಜೊತೆಗೆ ನಾನು ಜನಸ್ನೇಹಿಯಾಗಿ ಕೆಲಸ ಮಾಡುತ್ತೇನೆ.
ನಮ್ಮ ಆಫೀಸ್ ಗೆ ನ್ಯಾಯಕ್ಕಾಗಿ ಬರೋರು ನೇರವಾಗಿ ನನ್ನನ್ನು ಸಂಪರ್ಕಿಸಿ. ನ್ಯಾಯ ಕೊಡುವ ಉದ್ದೇಶದಿಂದ ಕೆಲಸ ಮಾಡುತ್ತೇನೆ. ನ್ಯಾಯಕ್ಕಾಗಿ ಬರೋರಿಗೆ ಎಫ್ಐಆರ್ ದಾಖಲಿಸಲು ಅವಕಾಶ ಇದೆ. ಯಾವುದೇ ಕಾರಣಕ್ಕೂ ರಾಜೀ ಸಂಧಾನಕ್ಕೆ ಅವಕಾಶ ಕೊಡೊದಿಲ್ಲ. ಎಫ್ಐಆರ್ ಮಾಡದೇ ರಾಜೀ ಪಂಚಾಯತ್ ಗೆ ನನ್ನ ಅವಧಿಯಲ್ಲಿ ಅವಕಾಶವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಪೊಲೀಸರನ್ನ ನೋಡಿ ಯಾರೂ ಭಯ ಪಡಬಾರದು. ಕಾನೂನಿನ ಭಯ ಇರಬೇಕು ಎಂದರು.


