
ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಪತಿ ಮಹಾಶಯ ಪತ್ನಿ ತಾನು ಹೇಳಿದಂತೆ ವಿಚ್ಛೇಧನ ಕೊಟ್ಟಿಲ್ಲ ಎಂಬ ಕಾರಣಕ್ಕೆ ಗನ್ ಖರೀದಿಸಿ, ಟ್ರೇನಿಂಗ್ ಪಡೆದು ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಈ ಘಟನೆ ನಡೆದಿದೆ, ಬಾಲಮುರುಗನ್ ಪತ್ನಿಯನ್ನೇ ಗುಂಡಿಟ್ಟು ಕೊಂದ ಪತಿ. ಭುವನೇಶ್ವರಿ ಕೊಲೆಯಾದ ಪತ್ನಿ.
ಪತ್ನಿ ಡಿವೋರ್ಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ ಬಾಲಮುರುಗನ್ ಗನ್ ಖರೀದಿಸಲು ಮೂರು ಬಾರಿ ಬಿಹಾರಕ್ಕೆ ಹೋಗಿದ್ದಾನೆ. ಎರಡು ಬಾರಿ ಗನ್ ಕೊಡಿಸುವುದಾಗಿ ಹೇಳಿ ಬಿಹಾರದಲ್ಲಿ ಕೆಲವರು ಹಣ ಪಡೆದು ಮೋಸ ಮಾಡಿದ್ದಾರೆ. ಬೆಂಗಳೂರಿಗೆ ವಾಪಾಸ್ ಆದ ಬಾಲಮುರುಗನ್ ಮತ್ತೆ ಗನ್ ಖರೀದಿಗೆ ಬಿಹಾರಕ್ಕೆ ಹೋಗಿದ್ದಾನೆ. ಮೂರನೇ ಬಾರಿ ಹೋದವನು ಒಂದಲ್ಲ ಎರಡು ಗನ್ ಖರೀದಿಸಿದ್ದಾನೆ. ಅಲ್ಲದೇ 15 ದಿನಗಳ ಕಾಲ ಬಿಹಾರದಲ್ಲಿಯೇ ಗನ್ ತರಬೇತಿ ಪಡೆದುಕೊಂಡಿದ್ದಾನೆ.
ಬಳಿಕ ಬೆಂಗಳುರಿನಗೆ ಬಂದ ಮಹಾಶಯ, ತಮಿಳುನಾಡು ಮೂಲದ ಸುಪಾರಿ ಕಿಲ್ಲರ್ ಗೆ ಒಂದು ಗನ್ ಕೊಟ್ಟು ತನ್ನ ಪತ್ನಿ ಭುವನೇಶ್ವರಿಯನ್ನು ಕೊಲ್ಲುವಂತೆ 1.25 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದಾನೆ. ಆತ ಬೆಂಗಳೂರಿಗೆ ಬಂದು ಒಂದು ಲಾಡ್ಜ್ ನಲ್ಲಿ ಉಳಿದುಕೊಳ್ಳುತ್ತಾ ಭುವನೇಶ್ವರಿಯನ್ನು ವಾಚ್ ಮಾಡಲಾರಂಭಿಸಿದ್ದಾನೆ. ಆದರೆ ಕೊಲ್ಲಲು ಧೈರ್ಯ ಸಾಲದೇ ತನ್ನಿಂದ ಸಾಧ್ಯವಿಲ್ಲ ಎಂದು ಬಾಲಮುರುಗನ್ ಗೆ ಹೇಳಿದ್ದಾನೆ. ಬಾಲಮುರುಗನ್ ತಾನೂ ಜೊತೆಯಲ್ಲೇ ಇರುತ್ತೇನೆ. ನೀನು ಗುಂಡು ಹಾರಿಸು ಎಂದು ಹೇಳಿ ಕರೆದೊಯ್ದರೂ ಸುಪಾರಿ ಕಿಲ್ಲರ್ ಕೊಲೆ ಮಾಡದೇ ತಮಿಳುನಾಡಿಗೆ ವಾಪಸ್ ಆಗಿದ್ದಾನೆ.
ಇದಾದ ಬಳಿಕ ಬಾಲಮುರುಗನ್ ಸ್ವತಃ ತಾನೇ ಅಖಾಡಕ್ಕೆ ಇಳಿದಿದ್ದಾನೆ ಎರಡು ಬಾರಿ ಪತ್ನಿಯನ್ನು ಶೂಟ್ ಮಾಡಲು ಯತ್ನಿಸಿದರೂ ಧೈರ್ಯ ಸಾಲಲಿಲ್ಲ. ಮೂರನೇ ಬಾರಿ ಶೂಟ್ ಮಾಡಿದವನೇ ಗುಂಡಿಟ್ಟು ಪತ್ನಿಯನ್ನು ಕೊಂದೇ ಬಿಟ್ಟಿದ್ದಾನೆ. ಸದ್ಯ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.




