ಬಂದ್ ಗೆ ಕರೆ ನೀಡಿದವರು ತುಕಡೆ ಗ್ಯಾಂಗ್ ನೊಂದಿಗೆ ಸಂಬಂಧ ಹೊಂದಿದವರು: ಶೋಭಾ ಕರಂದ್ಲಾಜೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವಾ ಭಾರತ್ ಬಂದ್ ಖಂಡಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಇದು ತುಕಡೆ ಗ್ಯಾಂಗ್ ನೊಂದಿಗೆ ಸಂಬಂಧ ಹೊಂದಿರುವ ಸಂಘಟನೆಗಳು ಕರೆ ನೀಡಿರುವ ಬಂದ್ ಆಗಿದ್ದು, ಯಶಸ್ವಿಯಾಗಲ್ಲ ಎಂದು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಬಂದ್​ಗೆ ಕರೆ ಕೊಟ್ಟಿರುವ ಸಂಘಟನೆಗಳು ತುಕಡೆ ಗ್ಯಾಂಗ್​ ಗೆ ಸೇರಿದವರು. ದೇಶ ವಿರೋಧಿಗಳು ನಡೆಸುತ್ತಿರುವ ಈ ಭಾರತ್ ಬಂದ್​ಗೂ ಭಾರತಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕರ ಸಂಬಳ ಹೆಚ್ಚಳವಾಗಿದೆ. ಕಾಂಗ್ರೆಸ್​ನವರಿಗೆ ಬೇರೆ ಏನೂ ಕೆಲಸವಿಲ್ಲದೇ ಇಂತಾಹ ಪ್ರತಿಭಟನೆಗಳಿಗೆ ಪ್ರಚೋದಿಸುತ್ತಿದ್ದಾರೆ. ಸಾರ್ವಜನಿಕರ ಅಸ್ತಿ ಪಾಸ್ತಿ ನಷ್ಟ ಮಾಡುವುದು, ಕಾರ್ಮಿಕರಿಗೆ ತೊಂದರೆ ಮಾಡುವುದು ಕಾಂಗ್ರೆಸ್ಸಿಗರ ಕಾಯಕ ಎಂದು ಗುಡುಗಿದರು.

ಸಿಪಿಐ, ಸಿಪಿಎಂ ಪಕ್ಷಗಳ ಸಂಘಟನೆಗಳು ಕಾರ್ಮಿಕರಿಗೆ ಮಾಡಿರುವ ಅನ್ಯಾಯ ಬೇರೆ ಯಾರೂ ಮಾಡಿಲ್ಲ. ಈ ದೇಶದಲ್ಲಿ ಕಾರ್ಖಾನೆಗಳು ಬಂದ್ ಆಗುವ ಹಂತ ತಲುಪಿರುವುದಕ್ಕೆ ಇವರೇ ಕಾರಣ. ಇವರಿಂದ ಸಾಕಷ್ಟು ಜನ ಕೆಲಸವನ್ನೂ ಕಳೆದುಕೊಂಡಿದ್ದಾರೆ. ನಾಳೆ ನಡೆಯುವ ಭಾರತ್ ಬಂದ್ ಸಂಪೂರ್ಣ ವಿಫಲವಾಗಲಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button