Kannada NewsKarnataka NewsPolitics

*ಹಿಂದುಳಿದ ವರ್ಗಗಳ ಸಹಾಯವಿಲ್ಲದೆ ಸಮಾಜ ಮುನ್ನಡೆಯದು: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ದೇವಾಂಗ ಸಮಾಜ ಹಿಂದುಳಿದವರು ಎನ್ನುವ ಕೀಳರಿಮೆಯಿಂದ ಹೊರ ಬರಬೇಕು. ಹಿಂದುಳಿದ ವರ್ಗಗಳ ಸಹಾಯವಿಲ್ಲದೆ ಸಮಾಜ ಮುನ್ನಡೆಯುವುದಿಲ್ಲ. ಯಾರೂ ಸಹ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ನಗರದ ಅರಮನೆ ಮೈದಾನದಲ್ಲಿ ನಡೆದ ದೇವಾಂಗ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.

“ದೊಡ್ಡ ಸಂಖ್ಯೆ ಹೊಂದಿರುವ ಸಮುದಾಯಗಳು ನಿಮ್ಮ ವೃತ್ತಿಯನ್ನು ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ವಿಶ್ವಕರ್ಮ ಸಮುದಾಯದ ಶಿಲ್ಪಕಲೆ ಎಲ್ಲರಿಗೂ ಒಲಿಯುವುದು ಕಷ್ಟ. ಕಲ್ಲನ್ನು ಕಡೆದು ವಿಗ್ರಹ ಮಾಡುವವರು ಅವರು‌. ಅವರು ಕಲ್ಲನ್ನು ಕಡೆದರೆ ಆಕೃತಿಯಾಗುತ್ತದೆ. ಕುಂಬಾರಿಕೆ ಕೆಲಸ ಎಲ್ಲರೂ ಮಾಡಲು ಆಗುತ್ತದೆಯೇ? ಅದಕ್ಕಾಗಿ ಕೀಳರಿಮೆ ಬೇಡ. ಕಾಯಕ ಮಾಡುವ ವರ್ಗಗಳಿಂದಲೇ ಸಮಾಜದಲ್ಲಿ ಮನುಷ್ಯತ್ವ ಬದುಕಿದೆ” ಎಂದರು.

“ದೇವಾಂಗ ಸಮಾಜ ಪ್ರತಿದಿನವೂ ಶ್ರಮಪಟ್ಟು ದುಡಿಯುವ ಸಮಾಜ. ಪ್ರತಿದಿನವೂ ನೀವು ಸ್ಪರ್ಧೆ ಎದುರಿಸುತ್ತಲೇ ಇದ್ದರೂ ಹಿಂದೇಟು ಹಾಕದೇ ಮುನ್ನಡೆಯುತ್ತಾ ಇದ್ದೀರಿ. ನೀವು ಸಹ ಮುಂದುವರೆದ ಜನಾಂಗ. ಸರ್ವರಿಗೂ ಸಮಪಾಲಿನೊಂದಿಗೆ ಇರುತ್ತೇವೆ. ಈ ಸಮಾಜಕ್ಕೆ ಶಕ್ತಿ ತುಂಬುತ್ತೇವೆ ಸ್ಥೈರ್ಯ ನಿಮ್ಮಲ್ಲಿ ಇರಬೇಕು” ಎಂದರು. 

Home add -Advt

“ಸಮಾಜದ ಯುವಜನಾಂಗ ವಿದ್ಯೆಯನ್ನು ಪಡೆಯಬೇಕು ಜೊತೆಗೆ ನಿಮ್ಮ ಕಸುಬನ್ನು ಉಳಿಸಿ ಬೆಳೆಸಬೇಕು. ಆಧುನಿಕ ಕಾಲದಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೆಳೆಯಬೇಕು. ಅನೇಕ ಕಾರ್ಪೋರೇಟ್ ಕಂಪೆನಿಗಳು ಬಟ್ಟೆ ಉತ್ಪಾದನೆ ಮಾಡುತ್ತವೆ. ಅವರಿಂದ ನಿಮಗೆ ಸ್ಪರ್ಧೆ ಉಂಟಾಗಿದೆ. ಆದರೆ ನಿಮ್ಮ ಬಳಿ ಅನುಭವ, ಶ್ರಮ, ಕೈಗುಣವಿದೆ” ಎಂದರು.

“ದೇವರು ವರ,‌ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಸಿಕ್ಕಿರುವ ಅವಕಾಶವನ್ನು ಸಮುದಾಯ ಬಳಸಿಕೊಳ್ಳಬೇಕು. ಪುರಾಣದಲ್ಲಿಯೇ ದೇವಾಂಗ ಸಮುದಾಯದ ಬಗ್ಗೆ ಉಲ್ಲೇಖವಾಗಿದೆ. ಸಮುದಾಯಕ್ಕೆ ನಾಮಕರಣವೂ ದೇವಾಂಶ ಸಂಭೂತವಾಗಿ ಆಗಿದೆ. ನಿಮಗೆ ದೊರೆತಿರುವ ಪುಣ್ಯ ಬೇರೆಯವರಿಗೆ ದೊರೆಯುವುದಿಲ್ಲ” ಎಂದು ಹೇಳಿದರು.

“ದೇವರಿಗೆ ಉಡುಗೆ ಸೇರಿದಂತೆ ಸಮಾಜದ ಪ್ರತಿಯೊಬ್ಬರಿಗೂ ವೇಷ ಭೂಷಣಗಳನ್ನು ನೀಡುವವರು ನೀವು. ನಿಮ್ಮನ್ನು ಪಡೆದ ನಾವೇ ಭಾಗ್ಯವಂತರು. ನಾನು ಐತಿಹಾಸಿಕ ಶತಮಾನೋತ್ಸವ ಸಂದರ್ಭದಲ್ಲಿ ಕೇವಲ ಭಾಷಣ ಮಾಡಲು ಮಾತ್ರ ಬಂದಿಲ್ಲ. ದೇವಾಂಗ ಸಮಾಜ ಹಾಗೂ ಇತರೇ ಉಪ ಪಂಗಡಗಳ ಜೊತೆ ಡಿ.ಕೆ.ಶಿವಕುಮಾರ್ ಸದಾ ಇರುತ್ತಾನೆ ಎಂದು ಸಂದೇಶ ನೀಡಲು ಬಂದಿದ್ದೇನೆ” ಎಂದರು‌.

“ಶ್ರೀ‌ಕ್ಷೇತ್ರ ಚುಂಚನಗಿರಿಯಲ್ಲಿ ಇರುವ ದೇವಿಗೆ ದೇವಾಂಗ ಸಮುದಾಯ ವಸ್ತ್ರ ನೀಡಿ ಸೇವೆ ಮಾಡುತ್ತಿದ್ದಾರೆ. ನಮ್ಮ ಸಮಾಜ ನಿಮ್ಮ ಜೊತೆಗಿದೆ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದ್ದಾರೆ” ಎಂದರು.

“ಸಂಘದ ಅಧ್ಯಕ್ಷರು ಸಮಾಜಕ್ಕೆ ಜಾಗದ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ. ಬಿಡಿಎ ಮುಖಾಂತರ ಸ್ಥಳಾವಕಾಶ ನೋಡಲಾಗುವುದು. ಸಿಎ ನಿವೇಶನ ನೀಡಲು ಸೂಚಿಸಲಾಗುವುದು” ಎಂದು ಹೇಳಿದರು.

“ದೇವಾಂಗ ಸಮುದಾಯದ ಆರಾಧ್ಯ ದೈವ ಚೌಡೇಶ್ವರಿ ತಾಯಿ, ದೇವಲ ಮಹರ್ಷಿ, ಆದ್ಯ ವಚನಕಾರ ದೇವರ ದಾಸಿಮಯ್ಯ ಅವರಿಗೆ ಕೋಟಿ ನಮಸ್ಕಾರಗಳು” ಎಂದು ಹೇಳಿದರು.

Related Articles

Back to top button