*ಬೆಂಗಳೂರು ನಗರದ ಮೂಲಸೌಕರ್ಯಕ್ಕೆ 1.50 ಲಕ್ಷ ಕೋಟಿ ವೆಚ್ಚ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಹಾಗೂ ನಗರದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ 1.50 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲು ಮುಂದಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಶ್ರೀ ಮಹಾವೀರ್ ಜೈನ್ ಶಿಕ್ಷಣ್ ಸಂಘದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.
“ಇದು ಕೇವಲ ಸಿಲಿಕಾನ್ ನಗರ ಮಾತ್ರವಲ್ಲ ಆರೋಗ್ಯ ನಗರ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆದಿರುವ ನಗರವಾಗಿದೆ. ಕಳೆದ 25 ವರ್ಷಗಳಿಂದ ನಗರದ ಜನಸಂಖ್ಯೆ ದುಪ್ಪಟ್ಟಾಗಿದೆ. 1.40 ಕೋಟಿ ಜನಸಂಖ್ಯೆ ಇದ್ದರೆ, ವಾಹನಗಳ ಸಂಖ್ಯೆಯೇ 1.30 ಕೋಟಿಯಿದೆ. ಎಲ್ಲರೂ ಖಾಸಗಿ ವಾಹನಗಳ ಬಳಕೆ ಹೆಚ್ಚಾಗಿದ್ದು ಸಾರ್ವಜನಿಕ ಸಾರಿಗೆ ಬಳಸಲು ಮುಂದಾಗುತ್ತಿಲ್ಲ. ಹೀಗಾಗಿ ಸಂಚಾರ ದಟ್ಟಣೆ ಹೆಚ್ಚಾಗಿದೆ” ಎಂದರು.
“ಜೈನ ಸಂಸ್ಥೆ ಅತ್ಯುತ್ತಮ ಸೇವೆ ಮಾಡುತ್ತಿದೆ. ಹೀಗಾಗಿ ನಾನು ಕೂಡ ಶಿಕ್ಷಣ ಸಂಸ್ಥೆ ಹೊಂದಿದ್ದರೂ ನನ್ನ ಶಿಕ್ಷಣ ಸಂಸ್ಥೆ ಕಾರ್ಯಕ್ರಮಕ್ಕೆ ಹೋಗದೆ ಈ ಸಂಸ್ಥೆ ಜೊತೆ ಇದ್ದೇನೆ ಎಂದು ಹೇಳಲು ಬಹಳ ಸಂತೋಷದಿಂದ ಬಂದಿದ್ದೇನೆ” ಎಂದು ತಿಳಿಸಿದರು.
“ಇಲ್ಲಿರುವ ಅನೇಕರು ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬಂದಿದ್ದೀರಿ. ಬೆಂಗಳೂರು ಶ್ರೇಷ್ಠ ನಗರ. ಅತ್ಯುತ್ತಮ ಸಂಸ್ಕೃತಿ ಹಾಗೂ ಶಿಕ್ಷಣ ವ್ಯವಸ್ಥೆ ಹೊಂದಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರಿಂಗ್ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರಿಂಗ್ ವೃತ್ತಿಪರರಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಬಂದಾಗ ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದೆ. ವಿಶ್ವದ ನಾಯಕರೆಲ್ಲರೂ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೇ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಈ ನಗರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಇಲ್ಲಿನ ಮಾನವ ಸಂಪನ್ಮೂಲ ಕಾರಣ. ಇದಕ್ಕೆ ಇಂತಹ ಶಿಕ್ಷಣ ಸಂಸ್ಥೆಗಳು ಕಾರಣವಾಗಿವೆ” ಎಂದು ಹೊಗಳಿದರು.
“ನೀವು ನಿಮ್ಮ ಮೂಲ ಮರೆತರೆ ಯಶಸ್ಸು ಸಾಧಿಸಲು ಆಗುವುದಿಲ್ಲ. ಹೀಗಾಗಿ ನಿಮ್ಮ ಶಿಕ್ಷಣ ಸಂಸ್ಥೆ, ಶಿಕ್ಷಕರು ಹಾಗೂ ಸಮುದಾಯವನ್ನು ಮರೆಯಬಾರದು. ನೀವು ಮಾಡುವ ಉತ್ತಮ ಕೆಲಸಗಳಲ್ಲಿ ಈ ಡಿ.ಕೆ. ಶಿವಕುಮಾರ್ ಹಾಗೂ ಈ ಸರ್ಕಾರ ನಿಮ್ಮ ಜೊತೆ ನಿಲ್ಲಲಿದೆ ಎಂದು ಹೇಳಲು ಬಯಸುತ್ತೇನೆ. ನಿಮಗೆ ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದರು.




