*ಸಿಎಂ ಆಯ್ತು ಈಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆ ಅಷ್ಟೇ, ಆದರೆ ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ. ನಮ್ಮ ಹಂತದಲ್ಲಿ ಯಾವುದೂ ಆಗುವುದಿಲ್ಲ. ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇಂತಹ ಮಾತುಗಳನ್ನು ಎಲ್ಲರೂ ಸಾಮಾನ್ಯವಾಗಿ ಹೇಳುತ್ತಾರೆ. ಇದು ಹೊಸದೇನಲ್ಲ ಪ್ರಾಕ್ಟಿಸ್ ಆಗಿದೆ. ಆದರೆ ಸದ್ಯ ಸಿಎಂ ಬದಲಾವಣೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಇನ್ನು ಇದೇ ವೇಳೆ ಡಿ.ಕೆ ಶಿವಕುಮಾರ್ ಅಸ್ಸಾಂ ವೀಕ್ಷಕರಾಗಿ ನೇಮಕ ಮಾಡಿದ ವಿಚಾರದ ಬಗ್ಗೆ ಸತೀಶ್ ಜಾರಕಿಹೊಳಿ, ಡಿ.ಕೆ ಶಿವಕುಮಾರ್ ಗೆ ವೀಕ್ಷಕರ ಜವಾಬ್ದಾರಿ ನೀಡಲಾಗಿದೆ. ಬೇರೆಯವರಿಗೂ ಉಸ್ತುವಾರಿ ನೀಡಲಾಗಿದೆ. ಚುನಾವಣೆ ಮುಗಿಯುವವರೆಗೆ ಅವರು ಅಲ್ಲೇ ಇರಬೇಕಾಗುತ್ತದೆ ಎಂದು ಹೇಳಿದರು.
ಡಿ.ಕೆ ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಹೋದಾಗ ಸಭೆ ಮಾಡಿರಬಹುದು. ಸಚಿವರಾಗಿರದಿದ್ದರೂ ಸಭೆ ಮಾಡಿರಬಹುದು. ಅದನ್ನು ತಪ್ಪು ಎಂದರೆ ಹೇಗೆ? ಅವರ ಜಾಗದಲ್ಲಿ ಯಾರೇ ಇದ್ದರೂ ಹಾಗೇ ಮಾಡುತ್ತಿದ್ದರು. ಕುಮಾರಸ್ವಾಮಿ ಅವರ ಹೇಳಿಕೆಗೆ ಬೇರೆ ವ್ಯಾಖ್ಯಾನ ಇರಬಹುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಕನ್ನಡ ಶಾಲೆಗಳಲ್ಲಿ ಮಲೆಯಾಳಂ ಪಠ್ಯ ಸಂಬಂಧಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯಕ್ಕೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಸಿಎಂ ಅವರು ಕೇವಲ ಟ್ವಿಟ್ಗೆ ಸೀಮಿತವಾಗದೇ, ಕೇರಳ ಸರ್ಕಾರದ ಜೊತೆ ಮಾತನಾಡುತ್ತಾರೆ ಎಂದು ಹೇಳಿದರು.
ಇನ್ನು ನರೇಗಾ ಯೋಜನೆಯಲ್ಲಿ ರಾಜ್ಯಕ್ಕೆ ಶೇ. 40 ಮತ್ತು ಕೇಂದ್ರಕ್ಕೆ ಶೇ. 60 ಹಣ ಹಂಚಿಕೆ ಮಾಡುವ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿದ ಜಾರಕಿಹೊಳಿ, ರಾಜ್ಯ ಸರ್ಕಾರ ಯಾಕೆ 40% ಕೊಡಬೇಕು? ದೆಹಲಿಯಲ್ಲಿ ಕುಳಿತು ಕೆಲಸ ಹೇಳ್ತಾರೆ ಅಂದ್ರೆ ಹೇಗೆ? ಬಹಳಷ್ಟು ಬಿಜೆಪಿ ನಾಯಕರೇ ಈ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರಿಗೂ ಅನುಕೂಲವಾಗುವ ವ್ಯವಸ್ಥೆ ಆಗಬೇಕು ಎಂಬುದು ನಮ್ಮ ನಿಲುವು ಎಂದು ತಿಳಿಸಿದರು.




