Kannada NewsKarnataka News
ನಿಮ್ಮ ಅಭಿವೃದ್ಧಿ ಕಾರ್ಯಕ್ಕೆ ನಮ್ಮೆಲ್ಲರ ಬೆಂಬಲ -ಲಕ್ಷ್ಮಿ ಹೆಬ್ಬಾಳಕರ್ ಗೆ ಗ್ರಾಮಸ್ಥರ ಅಭಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗುಂದಿಯ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಸಮಗ್ರ ಅಭಿವೃದ್ಧಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಚಾಲನೆ ನೀಡಿದರು.
ವಿವಿಧ ಇಲಾಖೆಗಳ ಒಟ್ಟೂ 34 ಲಕ್ಷ ರೂ. ಅನುದಾನದಲ್ಲಿ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು.
ಇದರ ಜೊತೆಗೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿ, ಪೇಂಟಿಂಗ್ ಕಾಮಗಾರಿಗೂ ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಜೊತೆ ಚರ್ಚಿಸಿ ಚಾಲನೆ ನೀಡಲಾಯಿತು.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿಥಿಲವಾಗಿರುವ ಕೊಠಡಿಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಬೇಕು. ಮಕ್ಕಳಿಗೆ ಕಲಿಕೆಯ ವಾತಾವರಣ ನಿರ್ಮಾಣ ಮಾಡಬೇಕು. ಯಾವುದೇ ಕಾರಣದಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು. ಅದಕ್ಕಾಗಿ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಕ್ಷೇತ್ರ ಶಿಕ್ಷಣಾಧಿಕಾರಿ ಜುಟ್ನವರ್, ಯುವರಾಜ ಕದಂ, ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಾಜಿ ಬೋಕಡೆ, ಗೀತಾ ದೇಕುಳಕರ್, ಮೋಹನ ಬೆಳಗಾಂವಕರ್, ಎಸ್ ಡಿ ಎಮ್ ಸಿ ಚೇರ್ಮನ್, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಶಾಲಾ ಸಿಬ್ಬಂದಿಯ ವರ್ಗದವರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಮದ ಇನ್ನಿತರ ಸಮಸ್ಯಗಳ ಕುರಿತು ಸಹ ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಯ್ಕೆಯಾದ ನಂತರ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಿದೆ. ಇದನ್ನು ಮುಂದುವರಿಸಬೇಕು. ಇದಕ್ಕೆ ನಮ್ಮೆಲ್ಲರ ಬೆಂಬಲ, ಸಹಕಾರ ಇರಲಿದೆ ಎಂದು ಗ್ರಾಮಸ್ಥರು ಅಭಯ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ