*ಮೂರು ವಿಧಾನಸಭಾ ಕ್ಷೇತ್ರಗಳ ಬಸ್ ನಿಲ್ದಾಣಗಳಲ್ಲಿ ವಿಶೇಷ ವಸ್ತುಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗಾಗಿ ರಾಜ್ಯ ಸರಕಾರ ರೂಪಿಸಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಬಸ್ ನಿಲ್ದಾಣಗಳಲ್ಲಿ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ.
ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹತ್ತರಗಿ ಬಸ್ ನಿಲ್ದಾಣದಲ್ಲಿ ದಿನಾಂಕ: 12-01-2026 ರಿಂದ 14-01-2026ರ ವರೆಗೆ ಮೂರು ದಿನಗಳ ಕಾಲ; ರಾಯಬಾಗ ವಿಧಾನಸಭಾ ಕ್ಷೇತ್ರದ ರಾಯಬಾಗ ಬಸ್ ನಿಲ್ದಾಣದಲ್ಲಿ ದಿ:16-01-2026 ರಿಂದ 18-01-2026 ರ ವರೆಗೆ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರದ ಕುಡಚಿ ಬಸ್ ನಿಲ್ದಾಣದಲ್ಲಿ ದಿ:20-10-2026 ರಿಂದ 22-01-2026ರ ವರೆಗೆ ಮೂರು ದಿನಗಳ ಕಾಲ ವಸ್ತು ಪ್ರದರ್ಶನ ಜರುಗಲಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಸೋಮವಾರ(ಜ.12) ಬೆಳಿಗ್ಗೆ 10.30 ಗಂಟೆಗೆ ಹತ್ತರಗಿ ಬಸ್ ನಿಲ್ದಾಣದಲ್ಲಿ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಅದೇ ರೀತಿ ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ ಅವರು ಜ.16 ರಂದು ರಾಯಬಾಗ ಬಸ್ ನಿಲ್ದಾಣದಲ್ಲಿ ಮತ್ತು ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣವರ ಅವರು ಜ.20 ರಂದು ವಸ್ತುಪ್ರದರ್ಶನ ಮಳಿಗೆಗೆ ಚಾಲನೆ ನೀಡಲಿದ್ದಾರೆ.
ಸಾರ್ವಜನಿಕರು ಮಳಿಗೆಗಳಿಗೆ ಭೇಟಿ ನೀಡಿ ಸರಕಾರದ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಪ್ರಕಟಣೆಯಲ್ಲಿ ಕೋರಿದ್ದಾರೆ.



