*ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣ ಸಂಬಂಧ ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಏಳು ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ಸಂಬಂಧ ಮೃತಳ ತಾಯಿ ಸೂರ್ಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ಕಾಲೇಜಿನ ಉಪನ್ಯಾಸಕರ ಕಿರುಕುಳವೇ ಯಶಸ್ವಿನಿ ಸಾವಿಗೆ ಕಾರಣ ಎಂದು ಆರೋಪಿಸಲಾಗಿದ್ದು, ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಏಳು ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ.
ತರಗತಿಯಲ್ಲಿ ಆಕೆಯ ಚರ್ಮದ ಬಣ್ಣದ ಕುರಿತು ಅವಹೇಳನಕಾರಿ ಟೀಕೆಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಸೆಮಿನಾರ್ಗಳಿಗೆ ಹಾಜರಾಗಲು ಅವಕಾಶ ನೀಡದೇ, ಕಣ್ಣಿನ ನೋವು ಬಗ್ಗೆ ತಿಳಿಸಿದಾಗಲೂ ಅವಮಾನಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇನ್ನು ಜ.7 ರಂದು ಕಣ್ಣು ನೋವಿನಿಂದಾಗಿ ಕಾಲೇಜಿಗೆ ರಜೆ ಹಾಕಿದ್ದರು. ಮಾರನೇ ದಿನ ಕಾಲೇಜಿಗೆ ಹೋದಾಗ ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ? ಇಡೀ ಬಾಟಲ್ ಸುರಿದುಕೊಂಡ್ಯಾ ಎಂದು ವಿದ್ಯಾರ್ಥಿಗಳ ಮುಂದೆ ಉಪನ್ಯಾಸಕರು ಅವಮಾನಿಸಿದ್ದರು ಎನ್ನಲಾಗಿದೆ.



