*ಮಾತಿಗಿಂತ ಕೆಲಸದಲ್ಲಿ ಹೆಚ್ಚು ಶ್ರದ್ಧೆ ಇಟ್ಟುಕೊಂಡಿದ್ದೇನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ನಂದಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಶಿವಾಜಿ ಪುತ್ಥಳಿ ಸುತ್ತ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ: ನಾನು ಕೇವಲ ಭಾಷಣ ಮಾಡುವುದಿಲ್ಲ, ಮಾತಿಗಿಂತ ಕೆಲಸದಲ್ಲಿ ಹೆಚ್ಚು ಶ್ರದ್ಧೆ ಇಟ್ಟುಕೊಂಡಿದ್ದೇನೆ. ಚುನಾವಮೆ ಪೂರ್ವ ಮಾತುಕೊಟ್ಟಂತೆ ಕೆಲಸ ಮಾಡುತ್ತಿರುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ನಂದಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಸುಮಾರು 27.56 ಲಕ್ಷ ರೂಪಾಯಿ ವೆಚ್ಚದಲ್ಲಿ 2 ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಶಿವಾಜಿ ಪುತ್ಥಳಿ ಸುತ್ತ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಸಚಿವರು, ಜನರ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರಾದ್ಯಂತ ಕೆಲಸ ಮಾಡುತ್ತಿದ್ದೇನೆ ಎಂದರು.

ಗ್ರಾಮದಲ್ಲಿ ನಡೆಯಲಿರುವ ಜಾತ್ರೆಗೆ ಸಂಪೂರ್ಣ ಸಹಕಾರ ನೀಡುವೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. 224 ಶಾಸಕರ ಪೈಕಿ ಕೆಲವೇ ಮಂದಿಯಷ್ಟೇ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಮ್ಮ ಕ್ಷೇತ್ರಕ್ಕೆ ಉತ್ತಮ ಹೆಸರು ಬರುವಂತೆ ಮಾಡುತ್ತಿದ್ದೇನೆ ಎಂದರು.
ಈ ವೇಳೆ ಕಾಡಾ ಅಧ್ಯಕ್ಷರಾದ ಯುವರಾಜ್ ಕದಂ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಂಜುನಾಥ ನಂದಿಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆಂಜನೇಯ್ ಎಚ್, ಮಾರುತಿ ಲೋಕುರೆ, ಮಲ್ಲಿಕಾರ್ಜುನ ಲೋಕುರೆ, ರಾಮದಾಸ ಜಾಧವ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ಸಿಂಗಣ್ಣವರ್, ಉಪಾಧ್ಯಕ್ಷರಾದ ಕುಸುಮ್ ಬಾಯಿ ಪಟೇಲ್ ಮುಂತಾದವರು ಉಪಸ್ಥಿತರಿದ್ದರು.




