*ಜನೆವರಿ 21 ರಂದು ʼನಮ್ಮೊಳಗೊಬ್ಬ ಗಾಂಧಿʼ ನಾಟಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಹಾಗೂ ಕನ್ನಡ ಭವನ, ಬೆಳಗಾವಿಯ ಸಹಯೋಗದಲ್ಲಿ ಖ್ಯಾತ ನಾಟಕಕಾರ ಡಾ.ಡಿ.ಎಸ್.ಚೌಗಲೆ ಅವರ ʼನಮ್ಮೊಳಗೊಬ್ಬ ಗಾಂಧಿʼ ನಾಟಕದ ರಂಗ ಪ್ರಯೋಗವು ಬುಧವಾರ ದಿ: 21 ಜನೆವರಿ, 2026 ರ ಸಂಜೆ 6.30 ಕ್ಕೆ ನೆಹರು ನಗರದ ಹೊಟೆಲ್ ರಾಮದೇವ ಹಿಂದಿನ ಕನ್ನಡ ಭವನ ರಂಗಮಂದಿರದಲ್ಲಿ ನಡೆಯಲಿದೆ.
ಶಿವಮೊಗ್ಗ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ಈ ನಾಟಕದ ನಿರ್ದೇಶನವನ್ನು ಹೆಸರಾಂತ ನಿರ್ದೇಶಕ ಚಿದಂಬರರಾವ ಜಂಬೆ ಅವರು ನಿರ್ದೇಶಿಸಿದ್ದಾರೆ. ಸಹ ನಿರ್ದೇಶನ ಓಂಕಾರ ಮೇಗಳಾಪುರ ಅವರದು. ರಾಘವ ಕಮ್ಮಾರ ಅವರ ಸಂಗೀತವಿದೆ.
ಸ್ವಾತಂತ್ರ್ಯಪೂರ್ವದಲ್ಲಿ ನಡೆಯುವ ಕತೆಯಿದು. ಈ ನಾಟಕದಲ್ಲಿ ಒಂದು ಹಳ್ಳಿಯ ಅಜ್ಜ ಸ್ವಾತಂತ್ರ್ಯ ಚಳುವಳಿಯನ್ನು ಹಳ್ಳಿಯ ಜನರೊಂದಿಗೆ ಕಟ್ಟುತ್ತಾನೆ. ಆ ಊರಿನ ಜನರು ಬ್ರಿಟಿಷರ ಸಂಗಡ ಹೋರಾಡುವಾಗ ಕೆಲವು ಬ್ರಿಟಿಷ ಪರ ಅಧಿಕಾರಿಗಳು ತೊಂದರೆ ನೀಡುವರು. ಹಾಗು ಬಾಪು ಆ ಹಳ್ಳಿಗೆ ಭೇಟಿ ನೀಡುವನೆಂಬ ಕಾರಣಕ್ಕೆ ಎಲ್ಲರು ಕಾಯುವರು. ಹಾಗಾದರೆ ಬಾಪು ಊರಿಗೆ ಬಂದರೆ? ಹೇಗೆ? ನಾಟಕ ನೋಡಿ ಅರಿಯಿರಿ. ಸಮಕಾಲೀನ ಸಂದರ್ಭದಲ್ಲೂ ಬಾಪುವಿನ ಮೌಲ್ಯಗಳನ್ನು ಸಾರುವ ನಾಟಕವಿದು.
ಲೋಕೋಪಯೋಗಿ ಇಲಾಖೆ ಹಾಗು ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ನಾಟಕದ ಉದ್ಘಾಟನೆ ನೆರವೇರಿಸುವರು. ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಲಯದ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ನಾಟಕಕಾರ ಡಾ.ಡಿ.ಎಸ್.ಚೌಗಲೆ ಹಾಗು ಬೆಳಗಾವಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾ ಭಜಂತ್ರಿ ಅವರು ಉಪಸ್ಥಿತರಿರುವರು. ನಾಟಕ ವೀಕ್ಷಣೆಗೆ ಉಚಿತ ಪ್ರವೇಶವಿದೆ. ರಂಗಾಸಕ್ತರು ಇದರ ಲಾಭ. ಪಡೆಯಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



