Kannada NewsKarnataka NewsLatestPolitics

*ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ*

ಡ್ರಗ್ಸ್ ಪತ್ತೆ ಹಚ್ಚುವಲ್ಲಿ ವಿಫಲರಾದ ಪೊಲೀಸರ ಮೇಲೆ ಕ್ರಮಕ್ಕೆ ಸೂಚನೆ

ಪ್ರಗತಿವಾಹಿನಿ ಸುದ್ದಿ: ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

ಪೋಲೀಸ್ ಇಲಾಖೆ ಕೆಲವು ಠಾಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇನ್ನು ಕೆಲವೆಡೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸುಮಾರು 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ಮಾತ್ರವಲ್ಲದೆ, ಪೋಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂಥ ಕೆಲಸವಿದು ಎಂದರು.
2003 ರಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಯಚೂರು ಜಿಲ್ಲೆಯ ಕವಿತಾಳ, ಪೊಲೀಸ್ ಠಾಣೆ ದೇಶದಲ್ಲಿಯೇ ಉತ್ತಮ ಪೋಲೀಸ್ ಠಾಣೆಗಳ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದರು.

Home add -Advt

ಪೊಲೀಸರು ಜಾಗರೂಕತೆಯಿಂದ ಕೆಲಸ ಮಾಡಬೇಕು
ಪೋಲೀಸ್ ಸಬ್ ಇನ್ಸ್ಪೆಕ್ಟರ್, ಎ ಎಸ್ ಪಿ, ಡಿ ವೈ ಎಸ್ ಪಿ , ಎಸಿಪಿ ಇವರಿಗೆ ಗೊತ್ತಿಲ್ಲದೆ ಯಾವ ಅಪರಾಧವೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ವಿಶೇಷವಾಗಿ ದುರ್ಬಲರಿಗೆ ರಕ್ಷಣೆ ನೀಡಬೇಕು. ಬಲಾಢ್ಯರ ಕೈಗೊಂಬೆಗಳಂತೆ ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ ಎಂದರು.

ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು

ಕಳ್ಳತನ, ಸುಲಿಗೆ, ದರೋಡೆ, ಕೊಲೆ ಮುಂತಾದ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಸೈಬರ್ ಅಪರಾಧ ಹಾಗೂ ಡ್ರಗ್ಸ್ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಯುವಜನರು ಇದರಿಂದ ಹಾಳಾಗುತ್ತಿದ್ದು, ಕರ್ನಾಟಕವನ್ನು ಮಾದಕ ವಸ್ತು ಮುಕ್ತಾ ರಾಜ್ಯವಾಗಿಸಬೇಕೆಂದು ಸರ್ಕಾರ ಘೋಷಣೆ ಮಾಡಿದೆ. ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು. ಜೊತೆಗೆ ಯುವಜನರನ್ನೂ ರಕ್ಷಿಸಬಹುದು ಎಂದರು.

ಡ್ರಗ್ಸ್ ದಂಧೆ ಮಾಡುವ ವಿದೇಶಿಯರನ್ನು ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು
ರಾಜ್ಯವನ್ನು ಮಾದಕವಸ್ತು ಮುಕ್ತ ಮಾಡಬೇಕಾದರೆ ಡ್ರಗ್ಸ್ ಮಾರಾಟ ಮಾಡುವವರನ್ನು ವಿಚಾರಣೆ ಮಾಡಿದರೆ ಅಥವಾ ಮಾದಕ ವಸ್ತು ವ್ಯಸನಿಗಳನ್ನು ವಿಚಾರಿಸಿದರೆ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಬಹುದು. ಸರಬರಾಜು ಮಾಡುವವರನ್ನು ವಿಚಾರಣೆಗೆ ಗುರಿ ಪಡಿಸಿದರೆ ಉತ್ಪಾದಕರು ಹಾಗೂ ಸರಬರಾಜುದಾರರು ಯಾರು ಎಂದು ತಿಳಿಯುತ್ತದೆ. ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಕೆಲಸವನ್ನು ತಕ್ಷಣದಿಂದಲೇ ಮಾಡಬೇಕೆಂದು ಸೂಚಿಸಲಾಗಿದೆ. ವಿದೇಶಿಯರು ಜಾಮೀನಿನ ಮೇಲೆ ಬಿಡುಗಡೆಯಾಗಿ ಇಲ್ಲೇ ಉಳಿದರೆ ಪುನಃ ಅದೇ ಅಪರಾಧದಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ವಿದೇಶಿಯರನ್ನು ಯಾವುದೇ ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಪೋಲೀಸ್ ಠಾಣೆಗಳ ಮೇಲೆ ಮೇಲಾಧಿಕಾರಿಗಳು ನಿಗಾ ಇಡಬೇಕು
ಪೋಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಡಿ ವೈ ಎಸ್ ಪಿ ಗಳ ಮೇಲೆ ಮೇಲಾಧಿಕಾರಿಗಳು ನಿಗಾ ಇಡಲು ಸೂಚಿಸಲಾಗಿದೆ. ಅಪರಾಧಗಳಲ್ಲಿ ಅವರು ಶಾಮೀಲಾಗಬಾರದು.

ಡ್ರಗ್ಸ್ ಪತ್ತೆ ಹಚ್ಚುವಲ್ಲಿ ವಿಫಲರಾದ ಪೊಲೀಸರ ಮೇಲೆ ಕ್ರಮಕ್ಕೆ ಸೂಚನೆ

ಮಹಾರಾಷ್ಟ್ರದ ಪೊಲೀಸರಿಗೆ ಬೆಂಗಳೂರಿಗೆ ಬಂದು ಡ್ರಗ್ಸ್ ಪತ್ತೆಹಚ್ಚಲು ಸಾಧ್ಯವಾದರೆ, ರಾಜ್ಯದ ಪೊಲೀಸರು ಏಕೆ ಮಾಡಬಾರದು? ರಾಜ್ಯದ ಪೊಲೀಸರು ಇದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು, ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಸೈಬರ್ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣಕ್ಕೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕು
ಸೈಬರ್ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣಕ್ಕೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಾಗುತ್ತದೆ. ಹೊಸ ಕಾನೂನು ಅಥವಾ ತಿದ್ದುಪಡಿಯನ್ನು ಮುಂಬರುವ ದಿನಗಳಲ್ಲಿ ಮಾಡಬೇಕಾಗುತ್ತದೆ ಎಂದರು.

ಐಪಿಎಲ್ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಡಿ ಮೈಕಲ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ, ಅವರ ಶಿಫಾರಸ್ಸುಗಳನ್ನು ಪಾಲಿಸಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಅವರು ಅಲ್ಪಾವಧಿ ಶಿಫಾರಸ್ಸುಗಳನ್ನು ಕೂಡಲೆ ಜಾರಿಗೆ ತರಬೇಕು ಹಾಗೂ ದೀರ್ಘಾವಧಿಯಲ್ಲಿ ಉಳಿದವನ್ನು ಪಾಲಿಸಬೇಕಿದೆ. ಶಿಫಾರಸುಗಳನ್ನು ಜಾರಿ ಮಾಡಲೇಬೇಕು ಎಂದರು.

ಬಳ್ಳಾರಿ ಘಟನೆ: ತನಿಖಾ ವರದಿ ಬಂದ ನಂತರ ತಪಿತಸ್ಥರ ಮೇಲೆ ಕ್ರಮ
ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಪ್ರಕರಣವನ್ನು ಸಿಐಡಿ ಗೆ ವಹಿಸಲಾಗಿದೆ. ಬಳ್ಳಾರಿ ಸೂಕ್ಷ್ಮ ಪ್ರದೇಶವಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ . ತನಿಖಾ ವರದಿ ಬಂದ ನಂತರ ತಪಿತಸ್ಥರ ಮೇಲೆ ಕ್ರಮ* ಕೈಗೊಳ್ಳಲಾಗುವುದು ಎಂದರು.

ರಾಜೀವ್ ಗೌಡರನ್ನು ಬಂಧಿಸಲಾಗುವುದು
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಶಿಡ್ಲಘಟ್ಟದ ಪೌರಾಯುಕ್ತರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿಗಳು ಅವರು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲಾಗುವುದು. ಅವರ ಮೇಲೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ಪಕ್ಷದವರಾಗಲಿ, ಕಾನೂನಿಗಿಂತ ಯಾರೂ ಮೇಲಲ್ಲ ಎಂದರು.

ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಮ್, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಬಿ.ಬಿ.ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button