*ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕೆಲ ಪರೀಕ್ಷೆಗಳನ್ನು ಬದಲಾವಣೆ ಮಾಡಿದೆ.
ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆ ಇಂತಹ ಘಟನೆಗಳು ಮರುಕಳಿಸದಂತೆ ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, ಹೊಸ ಮಾರ್ಗಸೂಚಿ ಹೊರಡಿಸಿದೆ. ಎಸ್.ಎಸ್.ಎಲ್.ಸಿ ಎರಡನೇ ಪೂರ್ವಸಿದ್ಧತಾ ಪರೀಕ್ಷೆಗಳು ಜನವರಿ 27ರಿಂದ ಫೆಬ್ರವರಿ 2ರವರೆಗೆ ನಡೆಯಲಿವೆ. ಬೆಳಿಗ್ಗೆ 10 ಗಂಟೆಗೆ ಬದಲು 11 ಗಂಟೆಗೆ ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಯಿಂದ ನಿಯಮಿತ ತರಗತಿಗಳಿಗೆ ಹಾಜರಾಗಬೇಕು ಎಂದು ತಿಳಿಸಿದೆ.
ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಶಾಲೆಯ ಲಾಗಿನ್‌ನಿಂದ ಬೆಳಿಗ್ಗೆ 9.30ಕ್ಕೆ ಡೌನ್‌ಲೋಡ್ ಮಾಡಬೇಕು. ಬಳಿಕ 10 ಗಂಟೆಯೊಳಗೆ ಅವುಗಳನ್ನು ಮುದ್ರಿಸಬೇಕು. ಅಲ್ಲದೆ ಬೆಳಿಗ್ಗೆ 10.50ಕ್ಕಿಂತ ಮುಂಚಿತವಾಗಿ ಪರೀಕ್ಷಾ ಹಾಲ್‌ಗೆ ಕಳುಹಿಸಬಾರದು ಎಂದು ಸೂಚಿಸಲಾಗಿದೆ.
ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯ ಘಟನೆ ನಡೆದರೆ, ಸಂಬಂಧಿತ ಶಾಲೆಯ ಮುಖ್ಯಶಿಕ್ಷಕ, ನೋಡಲ್ ಶಿಕ್ಷಕ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರತಿ ಪ್ರಕರಣಕ್ಕೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಲಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.




