*ರೈತರ ಬಹುದಿನಗಳ ಬೇಡಿಕೆ ಈಡೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮಾವಿನಕಟ್ಟಿ ಮತ್ತು ಮಾರಿಹಾಳ ಗ್ರಾಮಗಳ ರೈತರ ಬಹುದಿನಗಳ ಬೇಡಿಕೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈಡೇರಿಸಿದರು.
ಮಾವಿನಕಟ್ಟಿ ಗ್ರಾಮದಲ್ಲಿ ಸುಮಾರು 2.12 ಕೋಟಿ ರೂ.ಗಳ ವೆಚ್ಚದಲ್ಲಿ ಮತ್ತು ಮಾರಿಹಾಳದಲ್ಲಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಶ್ರೀ ಪತ್ರಿ ಬಸವೇಶ್ವರ ದೇವಸ್ಥಾನದಿಂದ ರೈತರ ಹೊಲಗದ್ದೆಗಳಿಗೆ ತೆರಳುವ (ಬಿಡಾಡಿ ಮಾರ್ಗ) ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಸಚಿವರು ಚಾಲನೆ ನೀಡಿದರು.

ಈ ರಸ್ತೆಯ ನಿರ್ಮಾಣದಿಂದ ರೈತರು ಹೊಲಗಳಿಗೆ ಸಾಮಗ್ರಿ ಸಾಗಿಸಲು, ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಮತ್ತು ಹೊಲಗಳಿಗೆ ಸುಗಮವಾಗಿ ಓಡಾಡಲು ಹೆಚ್ಚಿನ ಅನುಕೂಲವಾಗಲಿದೆ. ಇದು ರೈತರ ಬಹು ಕಾಲದ ಬೇಡಿಕೆಯಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಹಿಂದೆ ನೀಡಿದ ಭರವಸೆಯಂತೆ ರೈತರ ಬೇಡಿಕೆ ಈಡೇರಿಸಿದ್ದರಿಂದ ರೈತರು ಧನ್ಯವಾದ ಸಲ್ಲಿಸಿ ಸಚಿವರನ್ನು ಸನ್ಮಾನಿಸಿದರು.
ಈ ವೇಳೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಶಿಂದೋಳಿಯಲ್ಲಿ ಸಹ ಹೊಲಕ್ಕೆ ತೆರಳುವ ರಸ್ತೆ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದ್ದರು.




