*ಅತ್ತೆ ಮಗನನ್ನು ಪ್ರೀತಿಸಿ ಮದುವೆ: ಎರಡೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ: ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: ನೂರಾರು ಕನಸಿನೊಂದಿಗೆ ಅತ್ತೆಯ ಮಗನನ್ನೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಮದುವೆಯಾದ ಎರಡೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ನಡೆದಿದೆ.
ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಅನಸೂಯ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಅತ್ತೆ ಮಗನನ್ನೇ ಪ್ರೀತಿಸಿ ಅನಸೂಯ ವಿವಾಹವಾಗಿದ್ದಳು. ಎರಡು ತಿಂಗಳ ಹಿಂದಷ್ಟೇ ಸಂಬಂದಿಕರ ಸಮ್ಮುಖದಲ್ಲಿ ಹಸೆಮಣೆಯೇರಿದ್ದಳು.
ಮದುವೆ ಬಳಿಕ ಸಿಟಿಯಲ್ಲಿ ವಾಸವಾಗಲು ಇಚ್ಛಿಸಿದ್ದಳು. ಆದರೆ ಸಿಟಿ ಬದಲು ಹಳ್ಳಿಯಲ್ಲಿ ವಾಸವಾಗಿದ್ದಕ್ಕೆ ಬೇಸರಗೊಂಡಿದ್ದಳು. ಮದುವೆಗೂ ಮುನ್ನ ಅನಸೂಯ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಳು. ಮದುವೆ ಬಳಿಕವೂ ಸಿಟಿಯಲ್ಲಿಯೇ ಇರಬೇಕು ಎಂಬುದು ಆಕೆಯ ಆಸೆಯಾಗಿತ್ತು. ಅನಸೂಯಾಳ ಸಹೋದರಿಯರು ಒಬ್ಬರು ಬೆಂಗಳೂರು ಹಾಗೂ ಮತ್ತೊಬ್ಬರು ಮುಂಬೈನಲ್ಲಿ ಸೆಟಲ್ ಆಗಿದ್ದರು. ಅಕ್ಕಂದಿರಂತೆ ತಾನೂ ಕೂಡ ಸಿಟಿಯಲ್ಲಿ ಪತಿಯೊಂದಿಗೆ ಇರಬೇಕು ಎಂಬುದು ಅನಸೂಯಾಳ ಕನಸಾಗಿತ್ತು. ಆದರೆ ಮದುವೆ ಬಳಿಕ ಆಕೆಯ ಕನಸು ನುಚ್ಚು ನೂರಾಗಿದೆ. ಮದುವೆ ಬಳಿಕ ಪತಿ ಅವಿನಾಶ್ ಜೊತೆ ಕಲಬುರಗಿಯ ಆಜಾದಪುರದಲ್ಲಿರುವ ಗಂಡನ ಮನೆಯಲ್ಲಿಯೇ ಕಾಲಕಳೆಯಬೇಕಾದ ಸ್ಥಿತಿ.
ಹಳ್ಳಿಯಲ್ಲಿ ಇರಲು ಇಷ್ಟವಿಲ್ಲ ಎಂದು ಹಲವು ಬಾರಿ ಅನಸೂಯಾ ಹೇಳಿದ್ದಳಂತೆ. ಇದೇ ವಿಚಾರವಾಗಿ ಮನನೊಂದ ಅನಸೂಯಾ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.


