
ಪ್ರಗತಿವಾಹಿನಿ ಸುದ್ದಿ: ತನ್ನ ಪತಿ ಕಾಮೋತ್ತೇಜಕ ಮಾತ್ರೆಗಳನ್ನು (sex enhancement pills) ಸೇವಿಸಿ ನಿರಂತರವಾಗಿ ದೈಹಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ 37 ವರ್ಷದ ಮಹಿಳೆಯೊಬ್ಬರು ಪತಿಯನ್ನು ಹತ್ಯೆ ಮಾಡಿದ್ದಾರೆ.
ಜನವರಿ 1 ರಂದು ಪತಿಗೆ ಅರಿಶಿನ ಹಾಲಿನಲ್ಲಿ ಇಲಿ ಪಾಷಾಣವನ್ನು ಬೆರೆಸಿ ನೀಡಿದ್ದರು. ಅದರಿಂದ ಪತಿ ಸಾಯದಿದ್ದಾಗ, ಜನವರಿ 5 ರಂದು ಅವರ ಕುತ್ತಿಗೆ ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಇದೇ ಕಾರಣ
ಪತಿ ಕಾಮೋತ್ತೇಜಕ ಮಾತ್ರೆಗಳನ್ನು ಸೇವಿಸಿ ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದನು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಹೈದರ್ ಅಲಿ ತಿಂಗಳಿಗೊಮ್ಮೆ ಸೂರತ್‌ನಲ್ಲಿರುವ ಮನೆಗೆ ಬರುತ್ತಿದ್ದ. ಕಾಮೋತ್ತೇಜಕ ಮಾತ್ರೆಗಳನ್ನು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ, ದೈಹಿಕವಾಗಿ ಮತ್ತು ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ತನಗೆ ಗಂಭೀರ ಗಾಯಗಳಾಗುತ್ತಿದ್ದವು ಎಂದು ಮಹಿಳೆ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಹೇಗೆ ಬೆಳಕಿಗೆ ಬಂತು?
ಆರಂಭದಲ್ಲಿ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಮಹಿಳೆ ವಾದಿಸಿದ್ದರು. ಆದರೆ, ಅಂತ್ಯಸಂಸ್ಕಾರದ ವಿಚಾರದಲ್ಲಿ ಪತಿಯ ಸಹೋದರನಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದಾಗ, ಮರಣೋತ್ತರ ಪರೀಕ್ಷೆಯಲ್ಲಿ ವಿಷ ಪ್ರಾಶನ ಮತ್ತು ಉಸಿರುಗಟ್ಟಿಸಿ ಸಾಯಿಸಿರುವುದು ದೃಢಪಟ್ಟಿದೆ.



