
ಪ್ರಗತಿವಾಹಿನಿ ಸುದ್ದಿ: ಪೌರಾಯುಕ್ತೆಗೆ ಧಮ್ಕಿ ಹಾಕಿ, ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಕರೆ ಮಾಡಿ ನಿಂದಿಸಿದ್ದ ರಾಜ್ವ್ ಗೌಡ ಧಮ್ಕಿ ಹಾಕಿ ಜೀವಬೆದರಿಕೆಯೊಡ್ಡಿದ್ದರು. ಈ ಕುರಿತ ಆಡಿಯೋ ವೈರಲ್ ಆಗಿತ್ತು. ಅಮೃತಾ ಗೌಡ ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೀವ್ ಗೌಡ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
೧೨ ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಅವರನ್ನು ಕೇರಳದ ಗಡಿಭಾಗದಲ್ಲಿ ಬಂಧಿಸಲಾಗಿತ್ತು. ಬಂಧಿತರನ್ನು ಕೋರ್ಟ್ ಗೆ ಹಾಜರುಪಡಿಸಿದಾಗ ನಿನ್ನೆ ಶಿಡ್ಲಘಟ್ಟ ಕೋರ್ಟ್ ರಾಜೀವ್ ಗೌಡರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ಇಂದು ಶಿಡ್ಲಘಟ್ಟ ಪೊಲೀಸರು ರಾಜೀವ್ ಗೌಡ ಅವರನ್ನು ಕಸ್ಟಡಿಗೆ ಕೇಳಿದ್ದರು.
ಈ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ಜೆ ಎಂ ಎಫ್ ಸಿ ಕೋರ್ಟ್ ರಾಜೀವ್ ಗೌಡ ಅವರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.




