*ಜಾತಿ ಭೇದ, ಅಸಮಾನತೆ ವಿರುದ್ಧ ಧ್ವನಿಯಾದವರು ಅಂಬಿಗರ ಚೌಡಯ್ಯನವರು: ಸಾಬಣ್ಣ ತಳವಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಾಜದಲ್ಲಿನ ಡಾಂಭಿಕ ಜೀವನ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ನೇರವಾಗಿ ಖಂಡಿಸಿ ವಚನಗಳ ಸತ್ಯದರ್ಶನ ಮಾಡಿಸಿದ ಅಂಬಿಗರ ಚೌಡಯ್ಯ ನಿಷ್ಠುರವಾದಿ ಶರಣರಾಗಿದ್ದರು. ಚೌಡಯ್ಯನವರು, ತಮ್ಮ ವಚನಗಳ ಮೂಲಕ ಜಾತಿ ಭೇದ, ಅಸಮಾನತೆ ಹಾಗೂ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ವಚನಕಾರರು ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಶನಿವಾರ (ಜ.31) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಉತ್ಸವ-2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೇರವಾಗಿ ಖಂಡಿಸುವುದೇ ಕಷ್ಟವಾಗಿತ್ತು. ಅಂತಹ ಸಮಯದಲ್ಲಿ ಅಂಬಿಗರ ಚೌಡಯ್ಯ ಸೈದ್ಧಾಂತಿಕ ನಿಲುವಿನೊಂದಿಗೆ ನಿಷ್ಠುರವಾಗಿ ಮಾತನಾಡ ತ್ತಿದ್ದರು. ಹೀಗಾಗಿ ಅವರು ಸತ್ಯನಿಷ್ಠ ಶರಣರು’ ಎಂದರು. ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಅದ್ದೂರಿಯಾಗಿ ಆಚರಿಸುತ್ತಿರುವುದು ಸಂಸದ ವಿಷಯ. ಸಮಾಜದ ಏಳಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಸಮಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಎಲ್ಲ ರೀತಿಯಲ್ಲಿ ಬೆಳೆಯುವ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿಗೆ ಬಂಧುಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು
ವಚನ ಸಾಹಿತ್ಯದಲ್ಲಿ ಇಷ್ಟು ವಚನಕಾರರು ಇದ್ದರೂ ಸಹ ಕೆಲವ ಅಂಬಿಗರ ಚೌಡಯ್ಯನವರಿಗೆ ಮಾತ್ರ ನಿಜ ಶರಣು ಎಂಬ ಹೆಸರು ಬಂದಿದೆ. ಶರಣ ಚಳವಳಿಯ ಭಾಗವಾಗಿ ಅವರು ವಚನ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಸರಳ ಜೀವನ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳನ್ನೇ ಧರ್ಮವೆಂದು ಬೋಧಿಸಿದರು. ಅವರ ವಚನಗಳು ಇಂದಿಗೂ ಸಮಾಜಕ್ಕೆ ದಾರಿ ತೋರಿಸುವ ದೀಪಗಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ತಿಳಿಸಿದರು
ವಚನಗಳ ಕಾಲದಲ್ಲಿ ವಚನಗಳ ಕ್ರಾಂತಿ ಹುಟ್ಟು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತಿದೆ. ಅಂಬಿಗರ ಚೌಡಯ್ಯನವರ ವಚನ ನೇರ ಮತ್ತು ಹರಿತವಾದ ವಚನಸಾಹಿತವಾಗಿತ್ತು. ಜಗಜ್ಯೋತಿ ಬಸವಣ್ಣವರು ಸಮಕಾಲೀನ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸಕ್ಕೆ ಮುಂದಾದವರು ಎಂದು ಸಾಹಿತಿ ನಾಗರಾಜ ಗಸ್ತಿ ಉಪನ್ಯಾಸ ನೀಡಿದರು. ಅಂಬಿಗ ಚೌಡಯ್ಯನವರು ಕಾಯಕವೇ ಕೈಲಾಸವನ್ನಾಗಿಸಿ ಮೂಲತಃ ದೋಣಿ ನಡೆಸುವ ಕಾಯಕ ಮಾಡುತ್ತಿದ್ದವರು. ಕಾಯಕ ನಿಷ್ಠೆ ಮತ್ತು ಸಮಾನತೆಯ ತತ್ವಗಳನ್ನು ಅವರು ತಮ್ಮ ವಚನಗಳ ಮೂಲಕ ಸಾರಿದ್ದಾರೆ.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಬಸವಣ್ಣನವರ 12ನೇ ಶತಮಾನದಲ್ಲಿ ಎಲ್ಲ ಸಮುದಾಯಗಳನ್ನು ಒಳಗೊಂಡು ವಚನಕಾರರ ವೇದಿಕೆಯಾಗಿತ್ತು. ಸಮಾಜದ ಅವ್ಯವಸ್ಥೆ, ಅಂಕು ಡೊಂಕುಗಳನ್ನು ತಮ್ಮ ಚಿಂತನೆಗಳನ್ನು ವಚನ ಸಾಹಿತ್ಯದ ಮೂಲಕ ತಿದ್ದಿದವರು. ಚೌಡಯ್ಯನವರ ವಚನ ಸಾಹಿತ್ಯ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೋಳಿ-ಬೆಸ್ತ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ ಕೋಳಿ-ಬೆಸ್ತ ಸಮಾಜ ಸಾಮಾಜಿಕ, ಶೈಕ್ಷಣಿಕವಾಗಿ ಇನ್ನಷ್ಟು ಬಲವಾಗಬೇಕಿದೆ. ಜಾತಿ ತಾರತಮ್ಯ ಮತ್ತು ಮೂಢನಂಬಿಕೆಗಳ ವಿರುದ್ಧ ಅಂಬಿಗ ಚೌಡಯ್ಯನವರು ನಡೆಸಿದ ಹೋರಾಟ ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ: ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಕೋಳಿ ಬೆಸ್ತ ಸಮಾಜ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ ಕಾರ್ಯಕ್ರಮ
ಕಾರ್ಯಕ್ರಮಕ್ಕೂ ಮುಂಚೆ ಅಶೋಕ ವೃತ್ತ ದಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಚಾಲನೆ ನೀಡಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರು ವಿದ್ಯಾವತಿ ಭಜಂತ್ರಿ, ಕೋಳಿ-ಬೆಸ್ತ ಸಮಾಜದ ಜಿಲ್ಲಾ ಅಧ್ಯಕ್ಷ ದಿಲೀಪಕುಮಾರ ಕುರಂದವಾಡ ಉಪಸ್ಥಿತರಿದ್ದರು.
ಮೆರವಣಿಗೆ ಚನ್ನಮ್ಮ ವೃತ್ತದ ಮಾರ್ಗವಾಗಿ ಕೊಲ್ಲಾಪುರ ಸರ್ಕಲ್ ದಿಂದ ಕುಮಾರ ಗಂಧರ್ವ ರಂಗ ಮಂದಿರದವರೆಗೆ ತಲುಪಿತು. ಮೆರವಣಿಗೆಯಲ್ಲಿ ಯಕ್ಷಗಾನ ಮತ್ತು ಡೊಳ್ಳು ಕುಣಿತ ಹಾಗೂ ವೇಷದಾರಿ ಪ್ರದರ್ಶನ ಜೊತೆಗೆ ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆ ಅತೀ ವಿಜೃಂಭಣೆಯಿಂದ ಸಾಗಿತು.




