Kannada NewsKarnataka NewsLatestLife Style

*ಪ್ರತಿಯೊಬ್ಬರೂ ಧರ್ಮಾಚರಣೆ‌ ಸಹಿತ ಕರ್ಮ ಮಾಡಬೇಕು: ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಪ್ರತಿಯೊಬ್ಬರೂ ಧರ್ಮಾಚರಣೆ‌ ಸಹಿತ ಕರ್ಮ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು‌.

ಶನಿವಾರ ಅವರು ನಗರದ ಯೋಗ ಮಂದಿರದಲ್ಲಿ ನಡೆದ 29ನೇ ವರ್ಷದ ವಾರ್ಷಿಕೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.

ಮನೆಯಲ್ಲಿ‌ ಮನೆ ಧರ್ಮ, ರಾಷ್ಟ್ರದಲ್ಲಿ ರಾಷ್ಟ್ರ‌ ಧರ್ಮ, ಸಮಾದಲ್ಲಿ‌ ಸಮಾಜ ಧರ್ಮ ಮೂಲಕ ಕರ್ಮ ನಡೆಸಬೇಕು ಎಂದ ಶ್ರೀಗಳು, ಸಂತ‌ ಪ್ರವಾಹದ ಮೂಲ ಗಂಗೋತ್ರಿ  ಶಂಕರ ಭಗವತ್ಪಾದರು. ಯೋಗ ಮಂದಿರದಲ್ಲಿ ಸ್ಥಾಪಿಸಿದ ಬಳಿಕ ಅನೇಕ ರೋಮಾಂಚನ ಅನುಭವಗಳು ಆಗುತ್ತಿವೆ ಎಂದರು. 

ಶಂಕರ ಭಗವತ್ಪಾದರ ಬಗ್ಗೆ ಇಡೀ ಜಗತ್ತಿನಲ್ಲಿ ಮಹತ್ತರ ಸ್ಥಾನವಿದೆ. ಅವರ ಸಮನ್ವಯ ಸಿದ್ಧಾಂತ ಬಹು ಪ್ರಮುಖವಾದದ್ದು. ಎಲ್ಲ ದೇವರ ಜೊತೆ ಇಷ್ಟ ದೇವರ ಆರಾಧನೆ ಮಾಡಬೇಕು. ಇಷ್ಟ ದೇವರ ಉಪಾಸನೆಯಿಂದ ಕೊನೆಯಲ್ಲಿ ಆನಂದವಾಗುತ್ತದೆ. ಅಂಥ ಆನಂದ ಸ್ವರೂಪವೇ ಎಲ್ಲಕ್ಕಿಂತ ಮೊದಲು ಎಂದರು.

Home add -Advt

ಸಮತ್ವದ ಚಿಂತನೆಗೆ ದೇವರ ಸೇವೆ ಪೂಜೆ ಮಾಡಬೇಕು. ಸಂಧ್ಯಾವಂದನೆ, ದೇವರಪೂಜೆ, ಯೋಗಾಸನ, ಪ್ರಾಣಾಯಾಮ, ಸ್ತ್ರೋತ್ರ ಪಠಣ, ಕಡ್ಡಾಯ ಭಗವಂತನ ಧ್ಯಾನ ಬೆಳಗಿನ ವೇಳೆ ಮಾಡಬೇಕು. ಮನೆ ಮನೆ ವಾತಾವರಣ ಬದಲಾದರೆ ಸಮಾಜದಲ್ಲಿ  ಕೂಡ ವಾತಾವರಣ ಬದಲಾಗುತ್ತದೆ ಎಂದರು.

 ಪ್ರಸಿದ್ಧ ನೇತ್ರ ತಜ್ಞ, ವೈದ್ಯ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕೆ.ವಿ, ವೈದ್ಯಕೀಯ ಕ್ಷೇತ್ರದ ಮೂಲಕ ಸೇವೆಗೆ ಅವಕಾಶ ಸಿಕ್ಕಿದ್ದು ಶ್ರೀಗಳ ಆಶೀರ್ವಾದ ಪುಣ್ಯ ಎಂದರು. 

ಹರಿದಾಸ ರತ್ನ ನಾರಾಯಣ ದಾಸ, ಗುರುಗಳ ಕೃಪೆಯಿಂದ ಎಂಥದ್ದನ್ನೂ ಸಾಧನೆ ಮಾಡಲು ಸಾಧ್ಯ. ಸಮಾಜದ ಋಣ ತೀರಿಸಲು ಭಗವಂತನ ನಾಮ ಸ್ಮರಣೆ ಮಾಡಬೇಕು ಎಂದರು.

ಸಮಾಜ ಇಂದು ಗಂಭೀರ ಸಮಸ್ಯೆಯಲ್ಲಿದೆ. ಎಲ್ಲ‌ ಸಮಾಜದಲ್ಲೂ ವಿವಾಹದ ಸಮಸ್ಯೆ ಇದೆ. ಯುವಕ‌ ಯುವತಿಯರು ವಿವಾಹಕ್ಕೆ ಸಿದ್ಧರಾಗುತ್ತಿಲ್ಲ. ಸಮಾಜ ಮುಂದೆ ಅಸ್ತವ್ಯಸ್ಥ ಆಗಲಿದೆ‌.  ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ವಿಫಲ ಆಗುವುದೇ ಸಮಸ್ಯೆ. ಸೂಕ್ತ ವಯಸ್ಸಿಗೆ ವಿವಾಹ ಆಗುವ ಮೂಲಕ ಸಮಾಜ‌ ಕೂಡ ಭದ್ರವಾಗಲಿದೆ ಎಂದರು.

ಹಿಗ್ಗು‌ ಕುಗ್ಗಿಗೆ ಬಲಿಯಾಗದೇ ಜೀವನದಲ್ಲಿ ಯೋಗದ, ಸಮತ್ವದ ಚಿಂತನೆ ಇದ್ದರೆ ಯಶಸ್ಸು. ಇಲ್ಲವಾದರೆ ಉದ್ವೇಗಕ್ಕೆ, ದುರ್ಘಟನೆಗಳಿಗೆ ಒಳವಡಿಸಿಕೊಳ್ಳುವ ಅಪಾಯವಿದೆ ಎಂದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಕೇಂದ್ರ ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ, ತೃಯಂಬಕ ಹೆಗಡೆ, ದಾಮೋದರ ಭಟ್ಟ, ಸುನಂದಾ ಭಟ್ಟ, ಮಾಧುರಿ ಶಿವರಾಮ, ಭಾರತಿ ನಾರಾಯಣದಾಸ ಇತರರು ಇದ್ದರು. ರಾಜರಾಜೇಶ್ವರಿ ವಿದ್ಯಾಲಯದ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಹೇಮಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಯೋಗ ಮಂದಿರದ ಅಧ್ಯಕ್ಷ ಎಸ್.ಎನ್.ಭಟ್ ಉಪಾಧ್ಯ ಸ್ವಾಗತಿಸಿದರು.  ಶಾಂತಾರಾಮ ಭಂಡಿಮನೆ, ದಾಮೋದರ ಭಟ್ಟ, ಕೆ.ವಿ.ಭಟ್ಟ ದಂಪತಿಗಳು‌ ಫಲ ಸಮರ್ಪಿಸುದರು. ಕಾರ್ಯದರ್ಶಿ ಸಿ.ಎಸ್.ಹೆಗಡೆ ವರದಿ ವಾಚಿಸಿದರು. 

ಶಂಕರ ಭಟ್ಟ ಉಂಚಳ್ಳಿ, ಶ್ರೀಕಾಂತ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಅನಿತಾ ಶ್ರೀಕಾಂತ ಹೆಗಡೆ ನಿರ್ವಹಿಸಿದರು. ಸ್ನೇಹಾ ಶರ್ಮಾ ಅವರನ್ನು ಗೌರವಿಸಲಾಯಿತು.

Related Articles

Back to top button