Karnataka NewsLatestPolitics

*ನಾವೇ ಜನರ ಪರ ಇದ್ದೇವೆ, ಬಂದ್ ಬೇಡ: ಡಿ.ಕೆ.ಶಿವಕುಮಾರ್ ಮನವಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಕಾವೇರಿ ಜಲ ವಿವಾದ ತೀವ್ರಗೊಳ್ಳುತ್ತಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನೀಡಿರುವ CWMA ಆದೇಶವನ್ನು ಖಂಡಿಸಿ ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಬಂದ್‌ ಬೇಡ, ಬಂದ್‌ನಿಂದ ಪರಿಹಾರ ಸಿಗಲ್ಲ. ನಾವೆ ಜನರ ಪರ ಇದ್ದೇವೆ. ದಯವಿಟ್ಟು ಬಂದ್ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಂದ್‌ನಿಂದ ಪರಿಹಾರ ಸಿಗಲ್ಲ. ಅಖಂಡ ಕರ್ನಾಟಕ ಬಂದ್‌ನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತೆ. ಹೀಗಾಗಿ ಆಗಸ್ಟ್‌ 13ರ ಬಂದ್ ಕೈಬಿಡುವಂತೆ ಮನವಿ ಮಾಡಿದ್ದಾರೆ.

15 ದಿನಗಳ ಕಾಲ ಕಾವೇರಿ ನೀರು ಬಿಡುವಂತೆ CWMA ಆದೇಶಿಸಿದೆ. ಸಂಕಷ್ಟದ ಕಾಲದಲ್ಲಿ ಇಂತಹ ತೀರ್ಪು ಹೊರಬಿದ್ದಿದೆ. ಕಳೆದ ವರ್ಷ ಸಾಕಷ್ಟು ಮಳೆಯಾಗಿತ್ತು. ಹಾಗಾಗಿ ಹಿಂದಿನ ವರ್ಷ ತಮಿಳುನಾಡಿಗೆ 400ಕ್ಕೂ ಹೆಚ್ಚು ಟಿಎಂಸಿ ನೀರು ಹೋಗಿದೆ. ಸಿಡಬ್ಯುಆರ್‌ಸಿ ಶಿಫಾರಸು ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಿದ್ದೆವು ಎಂದರು.

CWMA ಸಭೆಗೆ ಯಾರೂ ಹೋಗಿಲ್ಲ ಅಂತಾ ವಿಪಕ್ಷಗಳು ಆರೋಪಿಸಿವೆ. ನಮ್ಮ ರಾಜ್ಯದ ಪರ ಮೂವರು ಹಿರಿಯ ಅಧಿಕಾರಿಗಳು ಹೋಗಿದ್ದರು. ನೀರು ಬಿಡುಗಡೆಗೆ ಕೆಲ ಸಮಯ ನೀಡುವಂತೆ ಮನವಿ ಮಾಡಿದ್ದೆವು. ತಮಿಳುನಾಡು ಅಧಿಕಾರಿಗಳೂ ಪ್ರಬಲ ವಾದ ಮಂಡಿಸಿದ್ದಾರೆ. ರಾಜ್ಯದ ಪರ ಎಸಿಎಸ್‌ ಗೌರವ್ ಗುಪ್ತಾ ಸಹ ಪ್ರಬಲ ವಾದ ಮಂಡಿಸಿದರು. ನಿಮಗೆ ಹೆಚ್ಚು ನೀರು ಬರುತ್ತಿದೆ ಎಂದು CWMAನವರು ಹೇಳಿದ್ದಾರೆ.

Home add -Advt

ಇನ್ನು ಹೇಮಾವತಿ ಶೇ.67ರಷ್ಟು ತುಂಬಿದೆ, ಕೆಆರ್‌ಎಸ್‌ 36%, ಹಾರಂಗಿ 95%, ಕಬನಿ 83% ನೀರು ತುಂಬಿದೆ. ಎಲ್ಲರ ಬಳಿಯೂ ಈ ದಾಖಲೆ ಇದೆ. ಆದರೆ ಈಗ ಕೊಟ್ಟಿರುವ ಆದೇಶ ಪ್ರಕಾರ 4.5 ಟಿಎಂಸಿ ನೀರು ಬಿಡಲು ಹೇಳಿದೆ. ಈಗಾಗಲೇ ನಮಗೂ ಒಳಹರಿವು ಬರುತ್ತಿದೆ. ಆದರೂ ನನ್ನ ಮತ್ತು ಸರ್ಕಾರದ ಕರ್ತವ್ಯ ರಾಜ್ಯದ ಹಿತ ಕಾಪಾಡಬೇಕು. ಹಿಂದಿನ ಪರಿಸ್ಥಿತಿ ನಮಗೆ ಗೊತ್ತಿದೆ. ಈ ವರ್ಷವು ಶಾಸಕರ ಸಭೆ ಕರೆದು ಮಾತಾಡಿದ್ದೇನೆ. ರೈತರ ರಕ್ಷಣೆ ನಾವು ಮಾಡಿದ್ದೇವೆ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದೇವೆ. ರಾಜ್ಯದ ಹಿತಕ್ಕೆ ಎಲ್ಲಾ ರೀತಿಯ ರಕ್ಷಣೆಗೆ ನಾವು ಬದ್ಧತೆ ತೋರಿಸಿದ್ದೇವೆ. ಈಗಲೂ ರಾಜ್ಯದ ಹಿತ ಕಾಪಾಡುವ ಬದ್ಧತೆ ನಮಗಿದೆ ಎಂದು ತಿಳಿಸಿದ್ದಾರೆ.


ಕಾವೇರಿ ನೀರಿನ ವಿಚಾರ; ಕಾನೂನು ತಜ್ಞರು, ವಿರೋಧ ಪಕ್ಷಗಳ ಸಲಹೆ ಬಳಿಕ ಮುಂದಿನ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್

100 ವರ್ಷಗಳಲ್ಲಿ ಈ ವರ್ಷವೇ ತಮಿಳುನಾಡಿಗೆ ಅತಿ ಕಡಿಮೆ ನೀರು (ಜುಲೈ ಅಂತ್ಯದ ವೇಳೆಗೆ) ಬಿಟ್ಟಿದ್ದೇವೆ

ರಾಜ್ಯದಲ್ಲಿ ಒಳಹರಿವು ಚೇತರಿಕೆಗೆ ಸಮಾಧಾನಕರ ವಿಚಾರ

ಕೇಂದ್ರ ಸಚಿವರು ಹಾಗೂ ಸಂಸದರಿಂದ ಉತ್ತಮ ಸಹಕಾರ

ರಾಜ್ಯದ ಹಿತ ಕಾಯಲು ನಾವು ಬದ್ಧ, ಬಂದ್ ಮಾಡುವುದರಿಂದ ಪರಿಹಾರ ಸಿಗಲ್ಲ

ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಜೊತೆ ಸಭೆ

“ಕಾವೇರಿ ನೀರಿನ ವಿಚಾರವಾಗಿ ಕಾನೂನು ತಜ್ಞರ ಸಲಹೆ ಹಾಗೂ ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ಪಡೆದ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು.

“ಕಾವೇರಿ ನೀರಿನ ವಿಚಾರದಲ್ಲಿ ನಿತ್ಯ 3500 ಕ್ಯೂಸೆಕ್ ನೀರುನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿದೆ. ಈ ಹಿಂದೆ ಇಂತಹ ಸಂಕಷ್ಟ ಕಾಲದಲ್ಲಿ ಅನೇಕ ತೀರ್ಮಾನ ಬಂದಿವೆ. 2016, 2017, 2018, 2023ರಲ್ಲಿ ಇಂತಹ ಆದೇಶ ಬಂದಿವೆ. ಕಳೆದ 3 ವರ್ಷಗಳಲ್ಲಿ ಮಳೆ ಬಹಳ ಸಂತುಷ್ಟಿಯಾಗಿ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲೇ ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೆವು. ಕಳೆದ ವರ್ಷ ಉತ್ತಮ ಮಳೆ ಬೆಳೆ ಆಗಿತ್ತು. ಕಳೆದ ವರ್ಷ 177 ಟಿಎಂಸಿ ಬದಲಾಗಿ 400ಕ್ಕೂ ಹೆಚ್ಚು ಟಿಎಂಸಿ ನೀರು ಹರಿಸಲಾಗಿತ್ತು. ಅನೇಕ ಪ್ರಮಾಣದ ನೀರು ಸಮುದ್ರವನ್ನು ಸೇರಿದೆ” ಎಂದು ತಿಳಿಸಿದರು.

“ಬಿಳಿಗುಂಡ್ಲುವಿಗೆ 3,500 ಕ್ಯೂಸೆಕ್ ನೀರನ್ನು ಹರಿಸಲು ನೀಡಿರುವ ಆದೇಶದ ವಿರುದ್ಧ ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ನಮ್ಮ ವಿರೋಧ ಪಕ್ಷಗಳ ಸ್ನೇಹಿತರು, ಅಧಿಕಾರಿಗಳು ಹೋಗಿಲ್ಲ ಎಂದು ಆರೋಪ ಮಾಡಿದರು. ನಾನು ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಆದರೆ ರಾಜ್ಯದ ಜನರಿಗೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿಯಾಗಿದೆ. ನಿನ್ನೆ ಸಿಡಬ್ಲ್ಯೂಎಂಎ ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ಬಸವರಾಜ ಬೊಮ್ಮಾಯಿ ಅವರ ಬಳಿ ಇದ್ದ ಸಲಹೆಗಾರರನ್ನೇ ನಾವು ಮುಂದುವರಿಸಿದ್ದೇವೆ. ಅವರು ಸಭೆಯಲ್ಲಿ ಭಾಗವಹಿಸಿದ್ದರು” ಎಂದರು.

“ನೀರು ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಿ, ನೀರು ಬಿಡುವ ತೀರ್ಮಾನವನ್ನು ಮುಂದಕ್ಕೆ ಹಾಕಿ, ನಮಗೆ ಕಾಲಾವಕಾಶ ನೀಡಿ ಎಂದು ನಾವು ಮನವಿ ಮಾಡಿದ್ದೆವು. ಆದರೆ ತಮಿಳುನಾಡಿನವರು ನಿಮಗೆ ಹೆಚ್ಚಿನ ನೀರು ಬರುತ್ತಿದೆ. ನೀವು ಹೆಚ್ಚಿನ ನೀರು ಬಿಡಬೇಕು ಎಂದು ವಾದ ಮಂಡಿಸಿದರು. ನಮ್ಮ ಅಧಿಕಾರಿಗಳು ನಮಗೆ ಸಮಾಧಾನ ತರುವಂತೆ ಸಿಡಬ್ಲ್ಯೂಎಂಎ ಮುಂದೆ ವಾದ ಮಂಡಿಸಿದರು. ನಮ್ಮ ಅಡ್ವೋಕೇಟ್ ಜನರಲ್, ಎಸಿಎಸ್ ಅವರು ವಾದ ಮಂಡಿಸಿದ್ದಾರೆ. ಆದರೆ ಪ್ರಾಧಿಕಾರ, ನಿಮಗೆ ಒಳಹರಿವು ಇದ್ದು, ನಿಮಗೆ ಬಿಡಲು ಹೇಳಿರುವ ನೀರು ಕಡಿಮೆ ಪ್ರಮಾಣದ್ದಾಗಿದೆ ಎಂದು ಹೇಳಿದ್ದಾರೆ” ಎಂದರು.

ರಾಜ್ಯದಲ್ಲಿ ಒಳಹರಿವು ಚೇತರಿಕೆ, ಸಮಾಧಾನಕರ ವಿಚಾರ

“ಕಾವೇರಿ ಪ್ರಾಧಿಕಾರದವರಿಗೆ, ತಮಿಳುನಾಡಿನವರಿಗೆ, ಮಾಧ್ಯಮವರರು ಸೇರಿದಂತೆ ಎಲ್ಲರಿಗೂ ಪ್ರತಿ ಅಣೆಕಟ್ಟಿನ ಒಳಹರಿವಿನ ಮಾಹಿತಿ ಇದ್ದು, ಹಾರಂಗಿ ಜಲಾಶಯ 95%, ಕಬಿನಿ 83%, ಕೆಆರ್ಎಸ್ 36%, ಹೇಮಾವತಿಯಲ್ಲಿ 67% ನೀರು ಶೇಖರಣೆಯಾಗಿದೆ. ಈ ಮಾಹಿತಿಯನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಪ್ರತಿನಿತ್ಯ 3,500 ಕ್ಯೂಸೆಕ್ ನಂತೆ 15 ದಿನಕ್ಕೆ 4.5 ಟಿಎಂಸಿ ನೀರು ಹರಿಸಲು ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಒಳಹರಿವು ಚೇತರಿಕೆ ಕಂಡಿರುವುದು ಸಮಾಧಾನಕರ ವಿಚಾರ. ನಮ್ಮ ಅಣೆಕಟ್ಟುಗಳ ಒಳಹರಿವು 25 ಸಾವಿರ ಕ್ಯೂಸೆಕ್ ನಷ್ಟಿದ್ದು, ಅದರಲ್ಲಿ 3,500 ಕ್ಯೂಸೆಕ್ ನೀರು ಬಿಡಲು ಸೂಚಿಸಿದ್ದಾರೆ. ಈ ಮಾಹಿತಿಗಳನ್ನು ಸಮಿತಿ ಹಾಗೂ ಪ್ರಾಧಿಕಾರ ಎರಡೂ ತನ್ನ ಆದೇಶದಲ್ಲಿ ಸೂಚಿಸಿವೆ. ಆದರೂ ನಮ್ಮ ರಾಜ್ಯದ ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ನಾವು ನಮ್ಮ ರಾಜ್ಯದ ರೈತರ ರಕ್ಷಣೆ ಮಾಡುತ್ತೇವೆ. ನಾವು ಶಾಸಕರನ್ನು ಕರೆದು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸುವ ರಕ್ಷಣೆ ನೀಡಿದ್ದೇವೆ. ಬಂಗಾರಪ್ಪನವರ ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗೆಲ್ಲ ನಾವು ರಾಜ್ಯದ ಹಿತಕ್ಕೆ ಅಗತ್ಯ ರಕ್ಷಣೆ ನೀಡಲು ಬದ್ಧತೆ ತೋರಿದ್ದೇವೆ. ಈಗಲೂ ನಾವು ನಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದೇವೆ” ಎಂದರು.

ಕೇಂದ್ರ ಸಚಿವರು ಹಾಗೂ ಸಂಸದರಿಂದ ಉತ್ತಮ ಸಹಕಾರ:

“ವಿರೋಧ ಪಕ್ಷದ ನಾಯಕರು ಮಾಧ್ಯಮಗಳ ಮೂಲಕ ಅನೇಕ ಮಾರ್ಗದರ್ಶನ ನೀಡಿದ್ದಾರೆ. ನಾವು ಮೇಲ್ಮನವಿ ಸಲ್ಲಿಸುವ ಮುನ್ನ ಕೇಂದ್ರ ಸಂಸದರು ಹಾಗೂ ಕೇಂದ್ರ ಸಚಿವರ ಸರ್ವಪಕ್ಷ ಸಭೆ ಮಾಡಿದ್ದೆ. ಎಲ್ಲಾ ಪಕ್ಷದ ಸಂಸದರು ಬಹಳ ಗೌರವದಿಂದ ರಾಜ್ಯದ ನೆಲ, ಜಲ ವಿಚಾರದಲ್ಲಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ಮಾಡಿದ್ದಾರೆ. 3 ಕೇಂದ್ರ ಸಚಿವರು ಸೇರಿದಂತೆ 36 ಸಂಸದರು ಭಾಗವಹಿಸಿದ್ದರು. ನಾನು ಪ್ರಹ್ಲಾದ್ ಜೋಷಿ ಹಾಗೂ ಸಂಸದರ ಜತೆ ಚರ್ಚೆ ಮಾಡಿದ್ದೆ. ನಮ್ಮ ಮೇಲ್ಮನವಿ ಅರ್ಜಿಯನ್ನು ನಾವು ಜೋಷಿ ಅವರು, ಸೋಮಣ್ಣ ಹಾಗೂ ಶೋಭ ಕರಂದ್ಲಾಜೆ ಅವರಿಗೆ ಕಳುಹಿಸಿಕೊಟ್ಟಿದ್ದೆ. ಅವರು ಕೂಡ ತಮ್ಮ ಪ್ರಯತ್ನ ಮಾಡಿದ್ದಾರೆ. ಅವರು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕಿದ್ದಾರೆ” ಎಂದರು.

“ತಮಿಳುನಾಡಿನವರು 9.94 ಟಿಎಂಸಿ ನೀರನ್ನು ಹರಿಸಬೇಕು ಎಂದು ವಾದ ಮಂಡಿಸಿದ್ದರು. ಆದರೆ ಸಮಿತಿಯು ಅದರಲ್ಲಿ ಅರ್ಧದಷ್ಟು ಪ್ರಮಾಣದ ನೀರು ಹರಿವಿಗೆ ಸೂಚಿಸಿದ್ದಾರೆ. ಕಳೆದ 2-3 ದಿನಗಳಿಂದ ನಮ್ಮಲ್ಲಿ ಒಳಹರಿವು ಹೆಚ್ಚಾಗಿದೆ. ಈ ವಿಚಾರವಾಗಿ ಚರ್ಚೆ ಮಾಡಲು ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾವೇರಿ ಭಾಗದ ಎಲ್ಲಾ ಪಕ್ಷಗಳ ಶಾಸಕರು, ಸಂಸತ್ ಸದಸ್ಯರಿಗೆ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ಕಾನೂನು ತಂಡದ ಜೊತೆಗೆ ನಾನು, ಪರಮೇಶ್ವರ್, ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಸರ್ವಪಕ್ಷ ಸಭೆಯಲ್ಲಿ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಮಂಡಿಸಿ, ನಂತರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯ ಸಂಸದರು, ಕೇಂದ್ರ ಸಚಿವರು ನಮಗೆ ಸಹಕಾರ ನೀಡಿದ್ದಾರೆ. ಇಲ್ಲಿ ಕೆಲವರು ವಿರೋಧ ಮಾಡಿರಬಹುದು, ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ರಾಜ್ಯದ ಹಿತವನ್ನು ಅವರು ಕಾಪಾಡುತ್ತಾರೆ ಎಂದು ಭಾವಿಸಿದ್ದೇನೆ”

100 ವರ್ಷಗಳಲ್ಲಿ ಈ ವರ್ಷವೇ ತಮಿಳುನಾಡಿಗೆ ಅತಿ ಕಡಿಮೆ ನೀರು (ಜುಲೈ ಅಂತ್ಯದ ವೇಳೆಗೆ) ಬಿಟ್ಟಿದ್ದೇವೆ

“ನಾನು ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು, ರಾಜ್ಯದ ಹಿತಕ್ಕೆ ಅವರ ಸಲಹೆ ಪಡೆಯುತ್ತೇವೆ. ಸರ್ವಪಕ್ಷ ಸಭೆಯಲ್ಲಿ ಅವರು ಬರಲಿ, ಅವರ ಸಲಹೆ ನೀಡಲಿ. ರಾಜ್ಯದ ಹಿತಕ್ಕೆ ನಾವು ಬದ್ಧರಾಗೋಣ. ಜುಲೈ ಅಂತ್ಯದವರೆಗೆ ನಾವು ತಮಿಳುನಾಡಿಗೆ 0.6 ಟಿಎಂಸಿ ನೀರನ್ನು ಮಾತ್ರ ತಮಿಳುನಾಡಿಗೆ ಹರಿಸಿದ್ದು, ಕಳೆದ 100 ವರ್ಷಗಳಲ್ಲಿ ತಮಿಳುನಾಡಿಗೆ ಹರಿಸಲಾಗಿರುವ ಅತ್ಯಂತ ಕಡಿಮೆ ಪ್ರಮಾಣದ ನೀರಾಗಿದೆ. ಇದುವರೆಗೂ ಹರಿದಿರುವ ನೀರು ಅಣೆಕಟ್ಟುಗಳಿಂದ ಬಿಟ್ಟಿರುವ ನೀರಲ್ಲ, ಬೆಂಗಳೂರು ಸುತ್ತಮುತ್ತ ಬಿದ್ದ ಮಳೆ ನೀರು ಹರಿದು ಹೋಗಿರುವ ನೀರಿನ ಪ್ರಮಾಣ. ಇಷ್ಟಾದರೂ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಆಗಸ್ಟ್ 13ರಂದು ಬಂದ್ ಗೆ ಕರೆ ನೀಡುವ ಬಗ್ಗೆ ಚರ್ಚೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾವೇ ನಿಮ್ಮ ಪರವಾಗಿದ್ದು, ಬಂದ್ ಮಾಡುವ ಅಗತ್ಯವಿಲ್ಲ. ಇದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ” ಎಂದು ತಿಳಿಸಿದರು.

ರಾಜ್ಯದ ಹಿತ ಕಾಯಲು ನಾವು ಬದ್ಧ, ಬಂದ್ ಮಾಡುವುದರಿಂದ ಪರಿಹಾರ ಸಿಗಲ್ಲ

“ಬಂದ್, ಪ್ರತಿಭಟನೆಗಳಿಂದ ಜನರಿಗೆ ತೊಂದರೆ ಆಗಬಾರದು ಎಂದು ನ್ಯಾಯಾಲಯದ ತೀರ್ಮಾನಗಳಿದ್ದು, ಈ ಬಂದ್ ಮಾಡಬಾರದ ಎಂದು ಸರ್ಕಾರದ ಪರವಾಗಿ ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯದ ಹಿತದ ವಿರುದ್ಧವಾಗಿ ನಾವು ಕೆಲಸ ಮಾಡುವುದಿಲ್ಲ. ವಿರೋಧ ಪಕ್ಷದ ನಾಯಕರು ರಾಜ್ಯದಲ್ಲಿ ಆಡಳಿತ ಮಾಡಿದ್ದಾರೆ. ನಿಮ್ಮ ಕಾಲದಲ್ಲಿ ನೀವು ಅನೇಕ ತೀರ್ಮಾನ ಮಾಡಿದ್ದೀರಿ. ನಾಗೇಗೌಡರು, ಜೆ ಹೆಚ್ ಪಟೇಲರು ನೀರಾವರಿ ಮಂತ್ರಿಯಾಗಿದ್ದಾಗ, ದೇವೇಗೌಡರು ಪ್ರಧಾನಿಯಾಗಿದ್ದಾಗ ಅನೇಕ ತೀರ್ಮಾನ ಮಾಡಲಾಗಿತ್ತು, ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ, ಅದರ ಅಗತ್ಯವೂ ಇಲ್ಲ” ಎಂದು ತಿಳಿಸಿದರು.

ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಅವರ ಜೊತೆ ಸಭೆ

“ಆಗಸ್ಟ್ 3ರಂದು ತಮಿಳನಾಡು ಸಿಎಂ ಬರುವ ತೀರ್ಮಾನವಾಗಿತ್ತು. ಈ ಹಿಂದೆ ನಾನೇ ತಮಿಳುನಾಡಿಗೆ ಹೋಗಲು ಮನವಿ ಮಾಡಿದ್ದೆ ಆದರೆ ಡಿಎಂಕೆ ಸರ್ಕಾರ ಅನುಮತಿ ನೀಡಿರಲಿಲ್ಲ, ನಂತರ ಚುನಾವಣೆ ಬಂದು ಸರ್ಕಾರ ಬದಲಾಗಿದೆ. ಈಗ ವಿಜಯ್ ಅವರು ತಮ್ಮ ತಂಡದೊಂದಿಗೆ ಕರ್ನಾಟಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡುವ ಬೆಳವಣಿಗೆ ನಮಗೆ ಸಮಾಧಾನ ತರುತ್ತಿಲ್ಲ. ಈ ವಿಚಾರವನ್ನು ಸೌಹಾರ್ದತೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಸಮಸ್ಯೆ ಬಗೆಹರಿದರೆ ಅವರಿಗೂ ಹಿತ, ನಮಗೂ ಹಿತ. ಈಗ ಪರಿಸ್ಥಿತಿ ಉತ್ತಮವಾಗಿಲ್ಲ, ಹೀಗಾಗಿ ನಮ್ಮ ಸಭೆಯನ್ನು ಕೆಲ ದಿನಗಳ ಕಾಲ ಮುಂದೂಡೋಣ ಎಂದು ನಾನು ತಮಿಳುನಾಡು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಚರ್ಚೆ ಮಾಡುತ್ತೇನೆ. ಹೊರಗಿನಿಂದ ಅತಿಥಿಗಳು ಬರುವಾಗ ನಾವು ಸೌಹಾರ್ದತೆ ಹಾಗೂ ಗೌರವಪೂರ್ವಕವಾಗಿ ಆತಿಥ್ಯವಹಿಸಬೇಕು. ಹೀಗಾಗಿ ಆಗಸ್ಟ್ 3ರ ಬದಲು ಬೇರೆ ದಿನಾಂಕ ನಿಗದಿ ಮಾಡಿ ಮನವಿ ಮಾಡುತ್ತೇನೆ. ಅವರು ಅವರ ರಾಜ್ಯದ ಹಿತ ಕಾಪಾಡುವ ಉದ್ದೇಶವಿದ್ದರೆ, ನಮಗೆ ನಮ್ಮ ರಾಜ್ಯದ ಹಿತ ಕಾಪಾಡುವ ಉದ್ದೇಶವಿದೆ. ಸೌಹಾರ್ದತೆಯಿಂದ ಇದನ್ನು ಬಗೆಹರಿಸಿಕೊಳ್ಳಲು ಸಾಧ್ಯವೇ ಎಂದು ಚರ್ಚೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ನಾನು ಅಧಿಕಾರ ವಹಿಸಿಕೊಂಡ ಬಳಿಕ ಕೇಂದ್ರ ಜಲಶಕ್ತಿ ಸಚಿವರಾದ ಸಿ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ನಾನು, ತೆಲಂಗಾಣ ಸಿಎಂ ಹಾಗೂ ಆಂಧ್ರಪ್ರದೇಶ ಸಿಎಂ ಒಟ್ಟಿಗೆ ಸಭೆ ಮಾಡಿ ಒಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಆಂಧ್ರ ಸಿಎಂ ದೇಶದ ಹಿರಿಯ ರಾಜಕಾರಣಿ, ಅವರಿಗೆ ಸಾಕಷ್ಟು ಅನುಭವವಿದೆ. ಅವರೊಂದಿಗೆ ತುಂಗಭದ್ರಾ ಅಣೆಕಟ್ಟಿನ ಹೂಳು ತುಂಬಿರುವುದರಿಂದ ಕರ್ನಾಟಕಕ್ಕೆ ಆಗುತ್ತಿರುವ 33 ಟಿಎಂಸಿ ನೀರಿನ ನಷ್ಟವನ್ನು ತಡೆಯಲು ಸಮತೋಲಿತ ಅಣೆಕಟ್ಟು ನಿರ್ಮಾಣ ಸೇರಿದಂತೆ ಅನೇಕ ಪರ್ಯಾಯ ಆಯ್ಕೆ, ನದಿ ಜೋಡಣೆ ವಿಚಾರದಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿದೆ” ಎಂದರು.

“ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಕೈಗೆತ್ತಕೊಂಡು 90-10 ಅನುಪಾತದಲ್ಲಿ ಕೇಂದ್ರ ಸರ್ಕಾರ ಹಣವನ್ನು ಭರಿಸಲಿದೆ. ಹೀಗಾಗಿ ಸಿ ಆರ್ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೇ ರೀತಿ ತಮಿಳುನಾಡು ಸಿಎಂ ಕರ್ನಾಟಕಕ್ಕೆ ಆಗಮಿಸಿ ಚರ್ಚೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು, ಬಿಜೆಪಿ ಸ್ನೇಹಿತರು, ರೈತ ಸಂಘಟನೆಗಳು ಹೋರಾಟ ಮಾಡುತ್ತಿವೆ. ಅವರು ಹೋರಾಟ ಮಾಡುವುದನ್ನು ತಪ್ಪು ಎಂದು ಹೇಳುವುದಿಲ್ಲ. ನಮ್ಮ ಸರ್ಕಾರ ಪ್ರತಿ ಸಂದರ್ಭದಲ್ಲಿ ರಾಜ್ಯದ ಹಿತ ಕಾಪಾಡಿಕೊಂಡು ಬಂದಿದೆ. ಯಾವ ಸಂದರ್ಭದಲ್ಲೂ ರೈತರನ್ನು ಕೈ ಬಿಟ್ಟಿಲ್ಲ. ಇಂದು ಬೆಳಗ್ಗೆ ಬಿಜೆಪಿ ನಾಯಕರು ಹೋರಾಟ ಮಾಡಿದ್ದಾರೆ. ಅವರ ಪಕ್ಷದ ಕೇಂದ್ರದ ಮಂತ್ರಿಗಳು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ. ಸರ್ವಪಕ್ಷ ಸಭೆ ಕರೆಯಲಾಗಿದೆ. ಎಲ್ಲರ ಜೊತೆ ಚರ್ಚೆ ಮಾಡದೇ ನಾನು ಅಂತಿಮ ತೀರ್ಮಾನ ಮಾಡುವುದಿಲ್ಲ. ಹೀಗಿರುವಾಗ ಬಿಜೆಪಿ ನಾಯಕರು ಇಂದು ಹೋರಾಟ ಮಾಡುವ ಅಗತ್ಯವಿರಲಿಲ್ಲ”

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಪ್ರಯೋಜನ

“ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಪ್ರಯೋಜನವಾಗಲಿದೆ. ನಾವು ಕೇವಲ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಬಳಕೆಯಾಗಲಿದೆ. ಈ 66 ಟಿಎಂಸಿ ನೀರನ್ನು ಯಾವುದೇ ಕಾರಣಕ್ಕೂ ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ನೀರು ಹರಿಸುವ ಆದೇಶ ಬಂದಾಗ ಅದನ್ನು ಪಾಲನೆ ಮಾಡಲು ನೆರವಾಗುತ್ತದೆ. ಇತ್ತೀಚೆಗೆ ಬಂದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ತಮಿಳುನಾಡಿಗೆ 177 ಟಿಎಂಸಿ ನೀರು ಹರಿಸಬೇಕು ಎಂದು ನಮಗೂ ನಿರ್ದೇಶನ ನೀಡಿದೆ. ಅದನ್ನು ಪಾಲಿಸುವಲ್ಲಿ ನಮ್ಮ ಅಭ್ಯಂಥರವಿಲ್ಲ. ನಿಮ್ಮ ಜಾಗದಲ್ಲಿ ನೀವು ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಈ ಬಗ್ಗೆ ಉತ್ತರ ನೀಡಿದ್ದಾರೆ. ಈ ಮಧ್ಯೆ ತಮಿಳುನಾಡು ವಿಧಾನಸಭೆಯಲ್ಲಿ ಅವರು ನಿರ್ಣಯ ಮಂಡಿಸಿದ್ದಾರೆ. ಅದು ಅವರ ರಾಜಕಾರಣ, ಅದನ್ನು ನಾನು ಪ್ರಶ್ನೆ ಮಾಡುವುದಿಲ್ಲ. ನಾವು ನಮ್ಮ ರಾಜ್ಯದ ಹಿತಕ್ಕೆ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುತ್ತೇವೆ. ಮೇಕೆದಾಟು ಯೋಜನೆ ಡಿಪಿಆರ್ ತಿರಸ್ಕಾರಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಅದು ತಿರಸ್ಕಾರವಲ್ಲ, ಅವರು ಕೆಲವು ವಿಚಾರವಾಗಿ ಸ್ಪಷ್ಟನೆ ಕೇಳಿದ್ದು, ಅವುಗಳನ್ನು ಸಧ್ಯದಲ್ಲೇ ನೀಡುತ್ತೇವೆ” ಎಂದು ವಿವರಿಸಿದರು.

ತಮಿಳುನಾಡಿಗೆ ಕೂಡಲೇ ನೀರು ಹರಿಸುತ್ತೀರಾ ಎಂದು ಕೇಳಿದಾಗ, “ನಮ್ಮ ಮೇಲ್ಮನವಿ ತಿರಸ್ಕಾರಗೊಂಡಿದೆ. ಮುಂದೆ ಏನು ಮಾಡಬೇಕು ಎಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಸಭೆ ಬಳಿಕ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.

ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೆ ಎಂದು ಕೇಳಿದಾಗ, “ಈಗ ನಾವು ಅದರ ಬಗ್ಗೆ ಯಾಕೆ ಯೋಚನೆ ಮಾಡಬೇಕು” ಎಂದು ತಿಳಿಸಿದರು.

ನಮ್ಮ ರಾಜ್ಯದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗುವುದೇ ಎಂದು ಕೇಳಿದಾಗ, “ದೆಹಲಿ ಕಾನೂನು ತಜ್ಞರ ಸಲಹೆ, ಸರ್ವಪಕ್ಷ ಸಭೆಯಲ್ಲಿ ಮಾಜಿ ಸಿಎಂಗಳು ಹಾಗೂ ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆಯದೇ ಯಾವುದೇ ತೀರ್ಮಾನ ಮಾಡುವುದಿಲ್ಲ” ಎಂದು ತಿಳಿಸಿದರು.

ಎರಡು ರಾಜ್ಯಗಳ ಸಿಎಂಗಳ ಭೇಟಿ ಪ್ರಸ್ತಾಪ ನಮ್ಮ ರಾಜ್ಯದಿಂದ ಹೋಗಿದ್ದಾ ಅಥವಾ ತಮಿಳುನಾಡಿನಿಂದ ಬಂದಿದ್ದಾ ಎಂದು ಕೇಳಿದಾಗ, “ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯಿಂದ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬಂದಿದ್ದು, ಅವರ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಭೇಟಿ ನೀಡಿ ಅನೇಕ ವಿಚಾರವಾಗಿ ಚರ್ಚೆ ಮಾಡಲು ಬಯಸಿದ್ದಾರೆ ಎಂದು ತಿಳಿಸಲಾಗಿತ್ತು. ನಾವು ಅದಕ್ಕೆ ಸಮ್ಮತಿ ನೀಡಿ ಆಗಸ್ಟ್ 3ರಂದು ಸಭೆಗೆ ತೀರ್ಮಾನ ಮಾಡಿದ್ದೆವು. ಆದರೆ ಈಗ ಸಭೆಗೆ ವಾತಾವರಣ ಸರಿಯಾಗಿಲ್ಲ ಎಂದು ಮುಂದೂಡಲು ಚಿಂತಿಸುತ್ತಿದ್ದೇವೆ. ಎರಡೂ ರಾಜ್ಯದಲ್ಲಿರುವ ರೈತರು ನಮ್ಮ ದೇಶದವರೇ, ನಾವು ಒಟ್ಟಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು” ಎಂದು ತಿಳಿಸಿದರು.

ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದಾಗ, “ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇದಕ್ಕೆ 40 ಟಿಎಂಸಿ ನೀರಿನ ಅಗತ್ಯವಿದ್ದು, 36 ಟಿಎಂಸಿ ಕುಡಿಯಲು ಹಾಗೂ 4 ಟಿಎಂಸಿ ನೀರು ಆವಿಯಾಗುವ ಸಾಧ್ಯತೆ ಇರುತ್ತದೆ. ಉಳಿದಂತ ಹೆಚ್ಚುವರಿ ನೀರನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ನೀರುಹಂಚಿಕೆ ಸೂತ್ರದ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು” ಎಂದು ತಿಳಿಸಿದರು.

ಕಾನೂನು ತಜ್ಞರು ಎಲ್ಲಿ ಎಡವಿದ್ದಾರೆ ಎಂದು ಕೇಳಿದಾಗ, “ನಮ್ಮ ಕಾನೂನು ತಜ್ಞರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ” ಎಂದು ತಿಳಿಸಿದರು.

Related Articles

Back to top button