*ಮಹಿಳೆಯನ್ನು ಬರ್ಬರವಾಗಿ ಕೊಲೆಗೈದು, ಮೃತದೇಹವನ್ನು 9 ತುಂಡುಗಳನ್ನಾಗಿ ಕತ್ತರಿಸಿ ಕಾಲುವೆಗೆ ಎಸೆದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೋರ್ವ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, ಆಕೆಯ ಮೃತದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.
ಕೊಲೆಯಾದ ಮಹಿಳೆಯನ್ನು ಕಲ್ಯಾಣಿ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಘಟನೆ ನಡೆದಿದೆ. ಇಬ್ರಾಹಿಂಪಟ್ಟಣಂ ಬಳಿ ಗುರುತು ಪತ್ತೆಯಾಗದ ಸ್ಥಿತಿಯಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದವು. ಪೊಲೀಸರು ಈ ಪ್ರಕರಣದ ವಿವರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಆಕೆಯ ಕೈ ಮೇಲಿದ್ದ ಹಚ್ಚೆಯನ್ನು ನೋಡಿ ಸಂಬಂಧಿಕರು ಗುರುತಿಸಿ ಪೊಲೀಸರನ್ನು ಸಂಪರ್ಕಿಸಿದ್ದರು.
ತನಿಖೆ ವೇಳೆ ಭವಾನಿಪುರಂನಲ್ಲಿ ಮಟನ್ ಅಂಗಡಿ ನಡೆಸುತ್ತಿದ್ದ ಶಫಿ ಎಂಬಾತನೇ ಕೊಲೆ ಆರೋಪಿ ಎನ್ನಲಾಗಿದೆ. ಶಫಿ ಮತ್ತು ಕಲ್ಯಾಣಿ ನಡುವೆ ಪರಿಚಯವಿತ್ತು. ಆದರೆ ಹಣದ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿತ್ತು. ಅಲ್ಲದೆ, ಕಲ್ಯಾಣಿಯ ಮಗನಿಗೆ ಸಂಬಂಧಿಸಿದ ಹಳೆಯ ವಿವಾದದ ಕಾರಣದಿಂದಲೂ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು.
ಶಫಿ ಕಲ್ಯಾಣಿಯನ್ನು ಭವಾನಿಪುರಂನಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಹಣದ ವಿಚಾರವಾಗಿ ಜಗಳ ನಡೆದು, ಕೋಪಗೊಂಡ ಶಫಿ ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ದೇಹವನ್ನು 9 ಭಾಗಗಳಾಗಿ ಕತ್ತರಿಸಿ, ಅದನ್ನು ವಿಲೇವಾರಿ ಮಾಡಲು ತನ್ನ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗುರುವುಲು ಎಂಬಾತನ ನೆರವು ಪಡೆದಿದ್ದಾನೆ.
ಮೃತದೇಹದ ತುಂಡುಗಳನ್ನು ಗೊಲ್ಲಪುಡಿ ಪ್ರದೇಶದ ಕೂಲಿಂಗ್ ಕಾಲುವೆಗೆ ತೆಗೆದುಕೊಂಡು ಹೋಗಿ ಎಸೆದಿದ್ದಾನೆ. ಸದ್ಯ ಪೊಲೀಸರು ಪ್ರಮುಖ ಆರೋಪಿ ಶಫಿ ಹಾಗೂ ಆತನಿಗೆ ಸಹಕರಿಸಿದ ಗುರುವುಲು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



