Kannada NewsKarnataka News

ಸವದತ್ತಿ ಅಭಿವೃದ್ಧಿಗೆ ಮಹಾರಾಷ್ಟ್ರದಿಂದಲೂ ನೆರವು

https://youtu.be/BeJ_GbQpGRg

 

ಪ್ರಗತಿವಾಹಿನಿ ಸುದ್ದಿ,  ಉಗರಗೋಳ:  ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಮಹಾರಾಷ್ಟ್ರ ಸರ್ಕಾರದ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ ನಾಮದೇವರಾವ್ ವಾಡೆತ್ತಿವಾರ ಕುಟುಂಬ ಸಮೇತವಾಗಿ ಶನಿವಾರ ಭೇಟಿ ನೀಡಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದುಕೊಂಡರು.

ಯಲ್ಲಮ್ಮ ದೇವಸ್ಥಾನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ ಸಚಿವರನ್ನು ಸನ್ಮಾನಿಸಿದರು.
ನಂತರ ಸುದ್ದಿಗಾರರೊಂದಿಗೆ ವಾಡೆತ್ತಿವಾರ ಮಾತನಾಡಿ, ಆದಿಶಕ್ತಿ ಶ್ರೀ ರೇಣುಕಾಂಬೆಯ ಸ್ಥಳ ಜಾಗೃತ ಸ್ಥಾನವಾಗಿದೆ. ಹಲವು ವರ್ಷಗಳಿಂದ ಇಲ್ಲಿ ಭೇಟಿ ನೀಡುತ್ತಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಮುನ್ನ, ಯಲ್ಲಮ್ಮ ದೇವಿ ಆಶೀರ್ವಾದ ಪಡೆದುಕೊಂಡಿದ್ದೆ. ಅಮ್ಮನ ಹಾರೈಕೆಯಿಂದ ಸಚಿವ ಸ್ಥಾನ ಸಿಕ್ಕಿರುವುದು ಖುಷಿ ತಂದಿದೆ. ಏಳುಕೊಳ್ಳದ ನಾಡಿಗೆ ಭೇಟಿ ನೀಡಿದಾಗ ಸಿಗುವ ಆನಂದವೇ ಬೇರೆ. ಭಕ್ತರು ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಬೇಕು ಎಂದರು.

ಮಹಾರಾಷ್ಟ್ರದಲ್ಲಿ ದೇವಸ್ಥಾನಗಳ ಅಭಿವೃದ್ಧಿ ಮತ್ತು ಭಕ್ತರಿಗೆ ಮೂಲಸೌಕರ್ಯ ಒದಗಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಯಲ್ಲಮ್ಮನ ಸಾನ್ನಿಧ್ಯಕ್ಕೆ ಮಹಾರಾಷ್ಟ್ರದಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಹಾಗಾಗಿ, ಇಲ್ಲಿನ ಭಕ್ತರಿಗೆ ನಮ್ಮ ಕಡೆಯಿಂದಲೂ ಅಗತ್ಯ ಸಹಾಯ, ಸಹಕಾರ ನೀಡಲು ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ. ಜಾತ್ರೆ ಯಶಸ್ಸಿಗೆ ನಾವು ಕೈಜೋಡಿಸುತ್ತೇವೆ ಎಂದು ತಿಳಿಸಿದರು.
ಸಚಿವರ ಪತ್ನಿ ಕಿರಣ ವಡಿವೆತ್ತರ, ಆರ್.ಎಚ್.ಸವದತ್ತಿ, ಸಿ.ಎನ್.ಕುಲಕರ್ಣಿ, ಅಲ್ಲಮಪ್ರಭು ಪ್ರಭುನವರ, ಈರಣ್ಣ ಕುಲಕರ್ಣಿ, ಸದಾನಂದ ಈಟಿ, ಮಲ್ಲಯ್ಯ ತೊರಗಲ್ಲಮಠ, ನಾಗರತ್ನಾ ಚೋಳಿನ, ಅನಿಲ ಗುಡಿಮನಿ, ಯಲ್ಲಮ್ಮ ದೇವಸ್ಥಾನದ ಅರ್ಚಕರಾದ ಪರಸನಗೌಡ ಕಾಳಿಂಗೌಡ್ರ, ಮಂಜುನಾಥಗೌಡ ಸಂದಿಮನಿ ಮತ್ತಿತರರು ಇದ್ದರು.

ಎರಡನೇ ದಿನವೂ ಜನಸಾಗರ:

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಬನದ ಹುಣ್ಣಿಮೆ ಎರಡನೇ ದಿನವಾದ ಶನಿವಾರವೂ ಜನಸಾಗರ ಕಂಡುಬಂತು. ಶುಕ್ರವಾರ ರಾತ್ರಿಯಿಡೀ ಯಲ್ಲಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ಸರತಿ ಸಾಲಲ್ಲಿ ನಿಂತು ಭಕ್ತರು ದೇವಿ ದರ್ಶನ ಪಡೆದರು. ನಸುಕಿನ ಜಾವವೇ ನೈವೇದ್ಯ ತಯಾರಿಸಿ, ಪರಡಿ ತುಂಬಿದರು. ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಸವದತ್ತಿ ನೂಲಿನ ಗಿರಣಿ ಹಾಗೂ ಜೋಗುಳಬಾವಿ ಮಾರ್ಗಗಳಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಸಂಭ್ರಮದಿಂದ ಜಾತ್ರೆಯಿಂದ ಪಾಲ್ಗೊಂಡ ಭಕ್ತರು, ತಮ್ಮೂರಿನತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬಂತು. ಬೆಳಗ್ಗೆ ಮತ್ತು ಸಂಜೆ ಯಲ್ಲಮ್ಮನಿಗೆ ವಿಶೇಷ ಪೂಜೆ ಜರುಗಿತು. ಭಕ್ತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button