ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಲಾ ದಿನಗಳಲ್ಲಿ ನಾನು ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಶಾಲಾ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ, ಪದವಿ ವಿದ್ಯಾರ್ಥಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ವಿವೇಕಾನಂದರ ಹೆಸರೇ ಒಂದು ಸ್ಪೂರ್ತಿ. ಶಕ್ತಿಶಾಲಿ, ಶ್ರದ್ಧಾವಂತರಾಗಿ ವಿಚಾರಗಳನ್ನು ತಿಳಿಸಿದವರು ಸ್ವಾಮಿ ವಿವೇಕಾನಂದರು ಎಂದು ಸ್ಮರಿಸಿದರು. ಇದೇ ವೇಳೆ ತಮ್ಮ ಶಾಲಾದಿನಗಳನ್ನು ನೆನೆಸಿಕೊಂಡ ಬಿಎಸ್ವೈ, ನಾನು ಮಂಡ್ಯದಲ್ಲಿ ಹೈಸ್ಕೂಲ್ ಓದಬೇಕಾದರೆ ತರಕಾರಿ, ನಿಂಬೆಹಣ್ಣು ಮಾರಿಕೊಂಡು ಇದ್ದೆ. ಇವಾಗ ರಾಜ್ಯದ ಜನರ ಆಶೀರ್ವಾದದಿಂದ ನಾಲ್ಕನೇ ಬಾರಿಗೆ ಸಿಎಂ ಆಗಿ ಬಂದು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು.
ಬೂಕನಕರೆಯಲ್ಲಿ ಹುಟ್ಟಿ ಹಲವು ರಾಜಕೀಯ ನಾಯಕರ ಮಾರ್ಗದರ್ಶನ ಪಡೆದು ಇವಾಗ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ಸಂಕಲ್ಪ ಮಾಡಿದ್ದರಿಂದಲೇ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ