Kannada NewsKarnataka News

ಸರ್ಕಾರಿ ಪ್ರೌಢ ಶಾಲೆಗಳನ್ನು ಪದವಿಪೂರ್ವ ಶಿಕ್ಷಣಕ್ಕೆ ಉನ್ನತೀಕರಿಸಲು ಚಿಂತನೆ

 ಪ್ರಗತಿವಾಹಿನಿ ಸುದ್ದು, ಗೋಕಾಕ : ಅರಭಾವಿ ಕ್ಷೇತ್ರದಲ್ಲಿ ಕಳೆದ ೧೫ ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಈಗಿರುವ ಪ್ರೌಢ ಶಾಲೆಗಳನ್ನು ಉನ್ನತೀಕರಣಗೊಳಿಸಿ ಅವರಿಗೆ ಪದವಿ ಪೂರ್ವ ಶಿಕ್ಷಣ ನೀಡುವ ಚಿಂತನೆ ನಡೆಸಿದ್ದೇನೆಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ನಗರದ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಭಾನುವಾರದಂದು ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮೂಡಲಗಿ ವಲಯದ ಅತಿಥಿ ಶಿಕ್ಷಕರಿಗೆ ೧೩.೫೦ ಲಕ್ಷ ರೂ. ಗೌರವಧನ ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾರ್ಥಿನಿಯರ ಪದವಿ ಪೂರ್ವ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಲಯಕ್ಕೆ ೧೪ ಪದವಿ ಪೂರ್ವ ಮಹಾವಿದ್ಯಾಲಯಗಳು ಅವಶ್ಯವಾಗಿವೆ. ಈ ದಿಸೆಯಲ್ಲಿ ಮುಂದಿನ ೩ ವರ್ಷಗಳ ಕಾಲ ನಾವೇ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ನೀಡಲು ಬಯಸಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆ. ಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದಾದರೆ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಈಗಾಗಲೇ ಸರ್ಕಾರಿ ಪ್ರೌಢ ಶಾಲೆಗಳಿಗೆ ಸ್ವಂತ ಕಟ್ಟಡಗಳು ಲಭ್ಯವಿದ್ದು, ಜೊತೆಗೆ ಸ್ನಾತಕೋತ್ತರ ಪದವಿ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಇವರ ಸೇವೆಯನ್ನು ಬಳಸಿಕೊಂಡು ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗದಂತೆ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಅವರು ಹೇಳಿದರು.

ಮೂಡಲಗಿ ವಲಯದ ವಿದ್ಯಾರ್ಥಿಗಳ ಸಾಧನೆ ದಿನೇ ದಿನೇ ಹೆಚ್ಚುತ್ತಿದೆ. ರಾಜ್ಯದಲ್ಲಿಯೇ ವಲಯ ಉತ್ತಮ ಸಾಧನೆಯತ್ತ ಮುನ್ನಡೆದಿದೆ. ಇದಕ್ಕೆ ಶಿಕ್ಷಕರ ಮುತುವರ್ಜಿ ಕಾಳಜಿಯಾಗಿದೆ. ಇಂದಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಗಳ ಮಧ್ಯೆಯೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಅತಿಥಿ ಶಿಕ್ಷಕರಿಗೆ ೧೩.೫೦ ಲಕ್ಷ ರೂ. ವಿತರಣೆ : ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ೩೬೭ ಶಿಕ್ಷಕರಿಗೆ ಟ್ರಸ್ಟ್ ಮೂಲಕ ೧೩.೫೦ ಲಕ್ಷ ರೂ.ಗಳ ಗೌರವಧನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ವಿತರಿಸಿದರು.

ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ :

ಸ್ವಾಮಿ ವಿವೇಕಾನಂದರ ೧೫೭ನೇ ಜಯಂತಿಯನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿವೇಕಾನಂದರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಲ್ಲೂ ಯುವ ಜನಾಂಗ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿ ವಿವೇಕಾನಂದರ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವಂತೆ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ೧೦ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಕಾವ್ಯಾ ಪ್ರಕಾಶನ ಹೊರತಂದಿರುವ ಗೆಲುವಿನ ದೀವಿಗೆ ಅಭ್ಯಾಸ ಕೈಪಿಡಿ ಮತ್ತು ೧೦ನೇ ವರ್ಗದ ೬೧೩೫ ಮಕ್ಕಳಿಗೆ ವಿಶೇಷ ಸರಣಿ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಉಚಿತವಾಗಿ ನೀಡಿದರು.

 

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೨೮ ವರ್ಷಗಳಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಿಕ್ಷಣ ಇಲಾಖೆಯ ಉನ್ನತಿ ಮತ್ತು ಪ್ರಗತಿಗಾಗಿ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ವಲಯದ ಅತಿಥಿ ಶಿಕ್ಷಕರಿಗೆ ಪ್ರತಿವರ್ಷ ಜೂನ್, ಜುಲೈ ತಿಂಗಳ ಗೌರವಧನ ಕೊಡುತ್ತಿದ್ದಾರೆ. ತಾಯಿ-ತಂದೆಯವರ ಸ್ಮರಣಾರ್ಥ ಮನ್ನಿಕೇರಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ೪ ಎಕರೆ ಜಮೀನು ನೀಡಿದ್ದಾರೆ.

ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದ್ದಾರೆ. ರಾಜ್ಯದಲ್ಲಿಯೇ ಅತೀ ಹೆಚ್ಚು ವಸತಿ ಶಾಲೆಗಳನ್ನು ಆರಂಭಿಸುವಲ್ಲಿ ಶಾಸಕರ ಪಾತ್ರ ಮಹತ್ವದ್ದಾಗಿದೆ. ಎನ್‌ಟಿಎಎಸ್‌ಇ, ಎನ್‌ಎಂಎಂಎಸ್, ನವೋದಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗಾಗಿ ಸಿದ್ಧತೆ ಮಾಡುವಲ್ಲಿ ಶಾಸಕರ ಪ್ರೋತ್ಸಾಹವನ್ನು ಸ್ಮರಿಸಿಕೊಂಡರು.

ಮೂಡಲಗಿ ವಲಯದ ಶಿಕ್ಷಕರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆಯುತ್ತಿರುವುದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳಿಗೆ ತೇರ್ಗಡೆಯಾಗುತ್ತಿರುವುದು ಹೆಮ್ಮೆಯಾಗಿದೆ ಎಂದು ಹೇಳಿದರು.

ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ :

ಇದೇ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮೂಡಲಗಿ ವಲಯದ ಸಿಆರ್‌ಪಿಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ಅತಿಥಿ ಶಿಕ್ಷಕರ ಸಂಘದಿಂದ ಸತ್ಕರಿಸಲಾಯಿತು.

ಜಿಪಂ ಸದಸ್ಯೆ ಶಕುಂತಲಾ ಪರುಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ಸುದೀರ ಜೋಡಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಘಯೋನೀಬ ಮಹಾಮಂಡಳಿ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಪ್ರಭಾಶುಗರ ನಿರ್ದೇಶಕ ಕೃಷ್ಣಪ್ಪ ಬಂಡ್ರೊಳ್ಳಿ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ಈರಣ್ಣಾ ಜಾಲಿಬೇರಿ, ಲಕ್ಷ್ಮಣ ಮಸಗುಪ್ಪಿ, ಮುಂತಾದವರು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಷನ್ : ಗೋಕಾಕ ೧ & ೨ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನಿಂದ ಅತಿಥಿ ಶಿಕ್ಷಕರಿಗೆ ೧೩.೫೦ ಲಕ್ಷ ರೂ. ಗೌರವಧನ ವಿತರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button