
ಪ್ರಗತಿವಾಹಿನಿ ಸುದ್ದಿ:: ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ಹೃದಯಾಘಾತವಾಗಿದೆ ಎಂದು ಬಿಂಬಿಸಿ ಅಂತ್ಯಕ್ರಿಯೆ ಮಾಡಲು ಹೋರಟ್ಟಿದ್ದ ಮಗಳು ಈದೀಗ ಪೊಲೀಸರ ಕೈಯಲ್ಲಿ ಸಿಲುಕಿಕೊಂಡಿದ್ದಾಳೆ.
ತುಮಕೂರು ನಗರದ ಬಂಡೇಪಾಳ್ಯ ಬಳಿಯ ಶ್ರೀನಗರ ನಿವಾಸಿ ಪುಷ್ಪಲತಾ ಫೆಬ್ರವರಿ 11 ರಂದು ರಾತ್ರಿ ನಿಗೂಢವಾಗಿ ಸಾವನಪ್ಪಿದ್ದರು. ಸ್ವಂತ ಸೂರು ಕಟ್ಟಿಕೊಂಡು ಮಗಳು ಸುಚಿತ್ರಾ ಹಾಗೂ ಆಳಿಯನ ಜೊತೆ ವಾಸವಿದ್ದರು. ಕಳೆದ ಕೆಲ ದಿನಗಳಿಂದ ಮಂಡಿನೋವು ಎಂದು ಹಾಸಿಗೆ ಹಿಡಿದಿದ್ದರು. ಆಕೆಯ ಜೊತೆಗೆ ವಾಸವಿದ್ದ ಮಗಳು ಹೃದಯಾಘಾತ ಎಂದು ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು. ಆದರೆ, ಅದೇ ಸಮಯಕ್ಕೆ, ಕೆಲವು ಮಂದಿ ಸ್ಥಳೀಯರು ಅನುಮಾನದಿಂದ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪುಷ್ಪಲತಾ ಹೃದಯಾಘಾತದಿಂದ ಸಾವನ್ನಪ್ಪಿಲ್ಲ, ಕೊಲೆಯಾಗಿದ್ದಾರೆ ಎಂಬ ಅಸಲಿ ಸತ್ಯ ಬಯಲಾಗಿದೆ.
ಪುಷ್ಪಲತಾರನ್ನು ಕೊಲೆ ಮಾಡಿದ್ದು, ಆಕೆಯ ಮಗಳೇ ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಸಹ ಪುಷ್ಪಲತಾ ಮನೆಯಲ್ಲಿಯೇ ವಾಸವಿದ್ದರು. ಸುರೇಶ ದುಡಿಮೆಯಲ್ಲೇ ಜೀವನ ಸಾಗುತಿತ್ತು ಎನ್ನಲಾಗಿದೆ. ಒಂದು ವರ್ಷದ ಹಿಂದೆ ಇದ್ದಕಿದ್ದಂತೆ ಆರೋಗ್ಯ ಸಮಸ್ಯೆಗೆ ಒಳಗಾದ ಪುಷ್ಪಲತಾ ಗಂಡ ಬಾಬು ನಾಯಕ್ ಮೃತಪಟ್ಟಿದ್ದರು. ತಂದೆಯ ಮುದ್ದಿನ ಮಗಳು ಸುಚಿತ್ರಾ, ಅವರನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಜ್ಯೋತಿಷಿಯೊಬ್ಬರ ಭೇಟಿ ಮಾಡಿದ್ದಳು. ಈ ವೇಳೆ ಬಾಬು ಸಾವಿಗೆ ಆತನ ಪತ್ನಿಯೇ ಕಾರಣ. ಪುಷ್ಪಲತಾ ಮಾಟಮಂತ್ರ ಮಾಡಿಸಿದ್ದರು. ನಿನಗೂ ಅವರಿಂದ ಕಂಠಕ ಇದೆ ಎಂದು ಜ್ಯೋತಿಷಿ ಹೇಳಿದ್ದರು ಎನ್ನಲಾಗಿದೆ. ಈ ಮಾತು ಕೇಳಿದ ಸುಚಿತ್ರಾ, ತನ್ನ ಪ್ರೀತಿಯ ತಂದೆಯನ್ನು ಕೊಂದಿದ್ದಾಳೆಂಬ ಅಲೋಚನೆ ಹಾಗೂ ತಾನೂ ಈಕೆಯಿಂದ ಸಾಯಬಹುದೆಂಬ ಆತಂಕದಲ್ಲಿ ಫೆಬ್ರವರಿ 11ರ ರಾತ್ರಿ ಊಟ ಮಾಡಿ ಮಲಗಿದ್ದ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಈ ಎಲ್ಲಾ ವಿಚಾರ ಗೊತ್ತಿದ್ದ ಸುಚಿತ್ರಾ ಗಂಡ ಮೌನವಹಿಸಿದ್ದ. ಪೊಲೀಸರ ತನಿಖೆ ವೇಳೆ ಆತ ಸಹ ಪರೋಕ್ಷವಾಗಿ ಶಾಮೀಲಾಗಿರುವ ಅಂಶಗಳು ಕಂಡು ಬಂದಿವೆ. ಸದ್ಯ ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಅನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿರುವುದಾಗಿ ಕ್ಯಾತಸಂದ್ರ ಪೊಲೀಸರ ವಿಚಾರಣೆ ವೇಳೆ ಸುಚಿತ್ರಾ ಒಪ್ಪಿಕೊಂಡಿದ್ದು, ಜ್ಯೋತಿಷಿ ಕಥೆ ಹೇಳಿದ್ದಾಳೆ. ಆದರೆ, ಅದರ ಜತೆಗೆ ಒಂದಷ್ಟು ಹಣದ ವಿಚಾರ ಸಹ ಕಾರಣ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.
ತಾನೇ ಕೊಂದು ಕಥೆ ಕಟ್ಟಿದ್ದ ಸುಚಿತ್ರಾ, ತಾವು ವಾಸವಿದ್ದ ಶ್ರೀನಗರದ ಮನೆಯಿಂದ ತುಮಕೂರು ತಾಲ್ಲೂಕಿನ ಅನುಪನಹಳ್ಳಿಯ ಸಂಬಂಧಿಕರ ಮನೆಗೆ ಬೆಳ್ಳಂಬೆಳಿಗ್ಗೆಯೇ ಶವ ತಂದಿದ್ದು, ಯಾರಿಗೂ ಗೊತ್ತಾಗದ ರೀತಿ ಎಲ್ಲರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು ಎಂಬುದೂ ವಿಚಾರಣೆ ವೇಳೆ ಗೊತ್ತಾಗಿದೆ. ಈ ವಿಚಾರ ತಿಳಿದ ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಶ್ರೀನಗರದ ಬಳಿ ತಾಯಿ ಹಾಗೂ ಮಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಪುಷ್ಪಲತಾ ಸಾವಿನ ವಿಚಾರ ತಿಳಿದವರು ಮೊದಲು ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಶವ ಹೂಳುವ ಸಂದರ್ಭದಲ್ಲಿ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಆ ಬಳಿಕ ಬಂದ ಪೊಲೀಸರು ನಡೆಸಿದ ವಿಚಾರಣೆ ವೇಳೆ ಕೊಲೆ ಸಂಗತಿ ಬಯಲಾಗಿದೆ.


