*ವಿದ್ಯಾರ್ಥಿಗಳು ಜಾನಪದ ಕಲೆಗಳನ್ನು ಅಳವಡಿಸಿಕೊಳ್ಳಬೇಕು; ರವಿ ಕೋಟಾಗಸ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿಗಳು ಜಾನಪದ ಕಲೆ, ಸಾಹಿತ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ಬಿಡುವಿನ ಸಮಯದಲ್ಲಿ ಮನರಂಜನೆಗಾಗಿ ಜಾನಪದ ಸಾಹಿತ್ಯ, ನೃತ್ಯ ನಾಟಕಗಳನ್ನು ಮಾಡುತ್ತಿದ್ದರು ಇದು ಕೇವಲ ಮನರಂಜನೆಯಾಗಿರದೇ ನಮ್ಮ ನಾಡಿನ ನಡೆ ನುಡಿ ಆಚಾರ ವಿಚಾರ ಹಾಗೂ ಹಳ್ಳಿಯ ಸೊಗಡನ್ನು ಸಾರುವಂತಾಗಿರುತ್ತದೆ ಎಂದು ಹಿರಿಯ ಸಾಹಿತಿ ರವಿ ಕೋಟಾಗಸ್ತಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಹಾಂತೇಶ ನಗರ ರಹವಾಸಿ ಸಂಘದ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 29 (ಬುಧವಾರ) ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿದ ಯುವ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಹೆಚ್ಚಿನ ಸಮಯವನ್ನು ಮೋಬೈಲದಲ್ಲಿಯೇ ಕಳೆಯುತ್ತಿದ್ದಾರೆ ಇದರಿಂದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಹೆಚ್ಚುತ್ತಿದೆ. ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ಕಲೆ, ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಕ್ರಿಡೆಗಳನ್ನು ರೂಡಿಸಿಕೊಳ್ಳಬೇಕು ಎಂದರು.
ಪುಟ್ಟರಾಜ ಗವಾಯಿ ಅವರು ಏಕಕಾಲದಲ್ಲಿ ಐದು ವಾದ್ಯಗಳನ್ನು ನುಡಿಸುತ್ತಿದ್ದರು. ವಿದ್ಯಾರ್ಥಿಗಳು ಸಂಗೀತ ಸಾಹಿತ್ಯ ಕಲೆಗಳನ್ನು ಮನರಂಜನೆಗೆ ಅಂತ ಆರಂಭಿಸಿದರೆ ಅದನ್ನು ಹವ್ಯಾಸವಾಗಿ ಪರಿವರ್ತಿಸಿಕೊಳ್ಳಬೇಕು. ಮಕ್ಕಳು ವಿದ್ಯಾಭ್ಯಾಸದೊಂದಿಗೆ ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಕಲೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ರವಿ ಕೋಟಾಗಸ್ತಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮ.ನ.ರ ಸಂಘದ ಶಿಕ್ಷಣ ಮಾಹಾವಿದ್ಯಾಲಯ ಪ್ರಾಚಾರ್ಯರಾದ ನಿರ್ಮಲಾ ಭಟ್ಟಲ ಜಾನಪದ ಸಂಗೀತವನ್ನು ಕೇವಲ ಹಳ್ಳಿಗಳಲ್ಲಿ ಹಾಗೂ ಹಿರಿಯರು ಹಾಡುತ್ತಿದ್ದರು ಆದರೆ ಇಂದು ವಿದ್ಯಾರ್ಥಿಗಳು ಸಹ ಅಂತಹ ಜಾನಪದ ಕಲೆಗಳನ್ನು ಕಲಿಯುತ್ತಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಕೆ.ಎಚ್ ಚನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅಕ್ಕ ಮಹಾದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬೈಲಹೊಂಗಲ ಪ್ರಾಂಶುಪಾಲರು ಸಿ ಬಿ ಗನಾಚಾರಿ, ಸರ್ದಾರ್ ಸರ್ಕಾರಿ ಪಿ ಯು ಕಾಲೇಜಿನ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಸಂಯೋಜಕರಾದ ಎಮ್.ಎಮ್ ಮುಲ್ಲಾ, ಮಾಂತ ಬಿ.ಇಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಮತ್ತು ಸರ್ದಾರ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




