Karnataka NewsLatestPolitics

*ರಾಜ್ಯ ವಿಭಜನೆಯಿಂದ ಉತ್ತರ ಕರ್ನಾಟಕ ಭಾಗಕ್ಕೆ ಲಾಭವಾಗುವುದಿಲ್ಲ*: *ಲಕ್ಣ್ಮಣ ಸವದಿ*

​ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಉತ್ತರ ಕರ್ನಾಟಕದವರು ಮನವಿ ಸಲ್ಲಿಸುವ ಬದಲು ತಮ್ಮ ಹಕ್ಕೊತ್ತಾಯವನ್ನು ಗಟ್ಟಿಯಾಗಿ ಮಂಡಿಸಬೇಕು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.


ಬೆಂಗಳೂರು ಅರಮನೆ ಮೈದಾನದಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಉತ್ತರ ಕರ್ನಾಟಕ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ವಿಭಜನೆಯಿಂದ ಈ ಭಾಗಕ್ಕೆ ಲಾಭವಾಗುವುದಿಲ್ಲ. ಅಖಂಡ ಕರ್ನಾಟಕದ ಒಳಗೆಯೇ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯವಾಗಬೇಕು; ಕೃಷಿ ಭೂಮಿಯನ್ನು ಮಾರಾಟ ಮಾಡದೆ ಕಾಯ್ದುಕೊಳ್ಳುವುದು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.


​​ಉತ್ತರ ಕರ್ನಾಟಕದವರು ಮನವಿ ಸಲ್ಲಿಸುವ ಬದಲು ತಮ್ಮ ಹಕ್ಕೊತ್ತಾಯವನ್ನು ಗಟ್ಟಿಯಾಗಿ ಮಂಡಿಸಬೇಕು. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಸೇರಿ ಅಖಂಡ ಕರ್ನಾಟಕವನ್ನು ಪೂರ್ವಜರು ಕಟ್ಟಿದ್ದು, ಇಚ್ಛಾಶಕ್ತಿಯಿಂದ ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.


​ನೀರಾವರಿ ಮತ್ತು ಕೈಗಾರಿಕೆಗೆ ಒತ್ತು: ಕೃಷ್ಣಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಸೇರಿದಂತೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಜೊತೆಗೆ ಈ ಭಾಗದವರೇ ಆದ ಎಂ.ಬಿ. ಪಾಟೀಲ ಅವರು ಕೈಗಾರಿಕಾ ಸಚಿವರಾಗಿದ್ದು, ಕೃಷಿಯ ಜೊತೆಗೆ ಉತ್ತರ ಕರ್ನಾಟಕಕ್ಕೂ ಕೈಗಾರಿಕೆಗಳನ್ನು ತರುವ ಚಿಂತನೆ ಹೊಂದಿದ್ದಾರೆ ಎಂದು ಹೇಳಿದರು.

​ಕೃಷಿ ಭೂಮಿ ಉಳಿಸಿಕೊಳ್ಳಲು ಕರೆ: ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಉದ್ಯೋಗ ನಷ್ಟದ ಆತಂಕ ಎದುರಾಗುತ್ತಿರುವ ಸಂದರ್ಭದಲ್ಲಿ, ಕೃಷಿ ಮತ್ತು ನಮ್ಮ ಭೂಮಿಯೇ ಮುಂದಿನ ಆಸರೆಯಾಗಲಿದೆ. ಹೊರಗಿನವರು ಕಡಿಮೆ ದರಕ್ಕೆ ಜಮೀನು ಖರೀದಿಸಲು ಮುಂದಾಗುತ್ತಿದ್ದು, ಯಾವುದೇ ಕಾರಣಕ್ಕೂ ರೈತರು ತಮ್ಮ ಜಮೀನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು. ಬಬಲಾದಿ ಅಜ್ಜನ ಕಾಲಜ್ಞಾನದ ಉಲ್ಲೇಖ ಮಾಡಿದ, ಅವರು ಮುಂದೆ ಒಕ್ಕಲುತನಕ್ಕೆ ಹೆಚ್ಚಿನ ಮಹತ್ವ ಬರಲಿದೆ ಎಂದು ಹೇಳಿದರು.

​ಸಹಕಾರ ಕ್ಷೇತ್ರ ಮತ್ತು ಜನಪ್ರತಿನಿಧಿಗಳ ಒಗ್ಗಟ್ಟು:
ಕಬ್ಬು, ಮೆಕ್ಕೆಜೋಳ, ಮೆಣಸಿನಕಾಯಿ, ದ್ರಾಕ್ಷಿ, ದಾಳಿಂಬೆ ಬೆಳೆ ಹಾಗೂ ಸಹಕಾರ ಬ್ಯಾಂಕುಗಳ ಮೂಲಕ ಉತ್ತರ ಕರ್ನಾಟಕ ಬಲಿಷ್ಠವಾಗಿದೆ. ಯುವಕರು ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸಲು ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಕರೆ ನೀಡಿದರು.

​ಅಲ್ಲದೆ, ಜಮೀನು ಖರೀದಿ ಸೇರಿದಂತೆ ಸಂಬಂಧಿತ ಕಾರ್ಯಗಳಿಗೆ ಜನರಿಂದ ದೇಣಿಗೆ ಸಂಗ್ರಹಿಸುವ ಅಗತ್ಯವಿಲ್ಲದೆ, ತಮ್ಮ ಕೈಲಾದ ಆರ್ಥಿಕ ನೆರವನ್ನು ಬೊಮ್ಮಾಯಿ ಅವರೊಂದಿಗೆ ಸೇರಿ ನೀಡುವುದಾಗಿ ಭರವಸೆ ನೀಡಲಾಯಿತು. ಬಸವಣ್ಣನವರ ವಚನವನ್ನು ಸ್ಮರಿಸಿ, ತಮ್ಮನ್ನು ಮನೆಯ ಮಕ್ಕಳಂತೆ ಆತ್ಮೀಯವಾಗಿ ಕರೆದು ಗೌರವಿಸಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿ, ಸಹಕಾರ ಸಚಿವ ಲಕ್ಷ್ಮಣ ಸವದಿ ಅವರಿಗೆ ಧನ್ಯವಾದ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮೇಟಿ, ನಿವೃತ್ತ ಅಧಿಕಾರಿಗಳು, ವಚನ ಸಾಹಿತ್ಯದ ಹಿರಿಯರು, ಸೋಮಶೇಖರ್, ಸಂಘಟನೆಯ ಪ್ರಮುಖ ಶಂಕರ್ ಬಾಗೂಜಿ, ಬಸವರಾಜ ತಿಂದೂರ, ಪಾಲಾಕ್ಷಿ ಬಾಣದ, ಕಲ್ಲಪ್ಪ ಲವಣಿ, ಪ್ರೊ. ಎಂ.ವಿ. ನೇಗೂರ, ನೀಲಕಂಠ ನಾಯರ್ ಸೇರಿದಂತೆ ಹಲವು ಗಣ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Back to top button