Kannada NewsKarnataka NewsLatest
*ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ಹಣಕ್ಕೆ ಬೇಡಿಕೆ ಇಟ್ಟ ಸೈಬರ್ ವಂಚಕರು*

ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚಕರು ಪೊಲೀಸ್ ಕಮಿಷನರ್ ಅವರನ್ನೂ ಬಿಟ್ಟಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ಸೈಬರ್ ವಂಚಕರು ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ನಕಲಿ ಖಾತೆ ರಚಿಸಿ, ಗಣ್ಯರೊಂದಿಗೆ ತೆಗೆದಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಜನರ ವಿಶ್ವಾಸ ಗಳಿಸಲು ವಂಚಕರು ಪ್ರಯತ್ನಿಸಿದ್ದಾರೆ.
ಪೊಲೀಸ್ ಆಯುಕ್ತರೇ ಪೋಸ್ಟ್ ಮಾಡುತ್ತಿದ್ದಾರೆಂದು ನಂಬಿದ ಕೆಲವರು ಆ ಖಾತೆಗೆ ಪ್ರತಿಕ್ರಿಯೆ ನೀಡಿದ್ದು, ಬಳಿಕ ಖಾಸಗಿ ಸಂದೇಶಗಳ ಮೂಲಕ ಹಣ ಕೇಳುವ ಯತ್ನ ನಡೆದಿದೆ ಎನ್ನಲಾಗಿದೆ.
ಬೆಂಗಳೂರು ನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಖಾತೆಗಳನ್ನು ಸೃಷ್ಟಿಸಿದವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರ ಹೆಸರಿನ ಖಾತೆಗಳನ್ನು ಕಂಡಲ್ಲಿ ಅವುಗಳನ್ನು ನಂಬುವ ಮೊದಲು ಪರಿಶೀಲನೆ ನಡೆಸಿ ಎಂದು ಪೊಲೀಸರು ಸೂಚಿಸಿದ್ದಾರೆ.



