Belagavi NewsBelgaum NewsKannada NewsKarnataka NewsNational

*ಹಾವೇರಿಯಲ್ಲಿ ಪ್ರೊ. ಎಸ್.ವಿ. ಸಂಕನೂರ ಪರ ಡಾ. ಪ್ರಭಾಕರ ಕೋರೆ ಮತಯಾಚನೆ*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯಾರ್ಥಿ ಪ್ರೊ. ಎಸ್.ವಿ. ಸಂಕನೂರ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಕಾಹೆರ್‌ನ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅವರು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಶಿಕ್ಷಕರ ಹಕ್ಕುಗಳ ರಕ್ಷಣೆ ಹಾಗೂ ಪದವೀಧರರ ಉದ್ಯೋಗಾವಕಾಶಗಳ ಸೃಷ್ಟಿಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿಹೇಳಿದರು.

ಶಿಕ್ಷಣವು ವ್ಯಕ್ತಿಯ ಬದುಕನ್ನು ರೂಪಿಸುವುದರ ಜೊತೆಗೆ ಸಮಾಜದ ಪರಿವರ್ತನೆ ಮತ್ತು ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿಯಾಗಿದೆ. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರಿಗೆ ನ್ಯಾಯ ದೊರೆತಾಗ ಮಾತ್ರ ಶಿಕ್ಷಣ ವ್ಯವಸ್ಥೆ ಬಲಗೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪ್ರೊ. ಎಸ್.ವಿ. ಸಂಕನೂರ ಅವರು ಬೋಧನಾ ಸೇವೆಯೊಂದಿಗೆ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್‌ನಲ್ಲಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಶಿಕ್ಷಕರ ನೇಮಕಾತಿ, ಬಡ್ತಿ, ಸೇವಾ ಭದ್ರತೆ, ಖಾಲಿ ಹುದ್ದೆಗಳ ಭರ್ತಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಪ್ರಯತ್ನ ಅಗತ್ಯವೆಂದು ಡಾ. ಕೋರೆ ತಿಳಿಸಿದರು.

ಪದವೀಧರ ಯುವಜನರಿಗೆ ಅರ್ಹತೆಗೆ ತಕ್ಕ ಉದ್ಯೋಗಾವಕಾಶಗಳು ದೊರೆಯಬೇಕು. ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು. ಉದ್ಯೋಗ ಮೇಳಗಳ ಜೊತೆಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಹೊಸ ತಂತ್ರಜ್ಞಾನಗಳ ತರಬೇತಿಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.

ಪಶ್ಚಿಮ ಪದವೀಧರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದು, ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಹಾಗೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಜನಪ್ರತಿನಿಧಿಯ ಪ್ರಮುಖ ಜವಾಬ್ದಾರಿಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರ ಗೌರವ, ಪದವೀಧರರ ಪ್ರಗತಿ ಮತ್ತು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಾಜದ ಏಳಿಗೆಗೆ ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ಪ್ರೊ. ಎಸ್.ವಿ. ಸಂಕನೂರ ಅವರ ಅನುಭವ ಮತ್ತು ಕಾರ್ಯಗಳನ್ನು ಪರಿಗಣಿಸಿ, ಶಿಕ್ಷಣ ಕ್ಷೇತ್ರದ ಹಿತದೃಷ್ಟಿಯಿಂದ ಮತದಾನದ ನಿರ್ಧಾರ ಕೈಗೊಳ್ಳುವಂತೆ ಡಾ. ಪ್ರಭಾಕರ ಕೋರೆ ಅವರು ಪದವೀಧರ ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರೊ. ಎಸ್.ವಿ. ಸಂಕನೂರ, ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಡಾ. ಬಾಲೆಹೊಸರು, ಎಂ.ಸಿ. ಕೊಳ್ಳಿ, ಕಿರಣ ಕೊಳ್ಳಿ, ಮಾಜಿ ಶಾಸಕ ವಿರುಪಾಕ್ಷ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನವರ, ಲಿಂಗನಗೌಡ್ರು, ಬಸವರಾಜ ಮಾಸುರ, ಎಸ್.ಎಂ. ಹುರಳಿಕೊಪ್ಪ, ಜಿ.ಎಸ್. ಅರಣಿ ಹಾಗೂ ಸಿ.ಬಿ. ಹಿರೇಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button