Belagavi NewsBelgaum NewsHealthKannada NewsKarnataka News

*32 ವಾರಗಳಲ್ಲಿ ಜನಿಸಿದ ಮಗುವಿಗೆ ಗಂಭಿರ ಕಾಯಿಲೆ: ಶಸ್ತ್ರಚಿಕಿತ್ಸೆ ಮೂಲಕ ಪ್ರಾಣ ಉಳಿಸಿದ ಕೆಎಲ್ಇ ವೈದ್ಯರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇವಲ 32 ವಾರಗಳಲ್ಲಿ ಜನಿಸಿದ ಮಗುವಿನ ತೂಕ ಒಂದೂವರೆ ಕೆಜಿ ಮಾತ್ರ. ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆಯ ನಂತರ ಪ್ಲೆಟಲೆಟ್‌ ತೀವ್ರ ಕಡಿಮೆಗೊಂಡು, ರಕ್ತ ಹೆಪ್ಪುಗಟ್ಟುವಿಕೆಯಿಂದ ಬಳಲುತ್ತಿತ್ತು. ಆಸ್ಪತ್ರೆಗೆ ಬಂದ ತಕ್ಷಣ ಮಗುವನ್ನು ಸಮಗ್ರವಾಗಿ ತಪಾಸಣೆಗೊಳ್ಪಡಿಸಿದಾಗ ನವಜಾತ ಶಿಶು ಅತ್ಯಂತ ಅಪರೂಪದ ಜೈಂಟ್‌ ಸಿಸ್ಟಿಕ್‌ ಮೆಕೊನಿಯಮ್‌ ಪೆರಿಟೊನಿಟಿಸ್‌ ಎಂಬ ಅತ್ಯಂತ ಗಂಭಿರವಾದ ಖಾಯಿಲೆಯಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ತಕ್ಷಣವೇ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವಿಗೆ ಪುನರಜನ್ಮ ಪ್ರಾಣ ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಚಿಕ್ಕಮಕ್ಕಳ ತಜ್ಞಶಸ್ತ್ರಚಿಕಿತ್ಸಕರಾದ ಡಾ. ಸಂತೋಶ ಕುರಬೆಟ್‌ ಅವರ ನೇತೃತ್ವದ ತಂಡವು ಯಶಸ್ವಿಯಾಗಿದೆ.

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ರೈತ ಕುಟುಂಬದ ಮದುವೆಯಾಗಿ ಸುಮಾರು 14 ವರ್ಷಗಳ ನಂತರ ಗರ್ಭವತಿಯಾದ ಗೃಹಿಣಿಗೆ ಕೇವಲ 32 ವಾರಗಳಲ್ಲಿ ತೊಂದರೆ ಕಾಣಿಸಿಕೊಂಡ ಪರಿಣಾಮ ನಗರದ ಖಾಸಗಿ ಆಸ್ಪತ್ರೆಯಲ್ಲಿ ಡಾ. ಅಸ್ಮಿತಾ ಕಟ್ಟಿ ಅವರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದರು. 

ಆದರೆ ಮಗು ಅವಧಿಗೆ ಮುನ್ನ ಜನಿಸಿದ್ದರಿಂದ ಶಿಶುವಿನ ತೂಕ ನಂತರ ನವಜಾತ ಶಿಶುವಿನ ಆರೋಗ್ಯದಲ್ಲಿ ತೀವ್ರ ತೊಂದರೆ ಕಂಡು ಬಂದಾಗ ಶೀಘ್ರವೇ ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. 

ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ಸಾಗಿಸಿ ಸಮಗ್ರವಾಗಿ ತಪಾಸಿಸಿದಾಗ ಜೈಂಟ್‌ ಸಿಸ್ಟಿಕ್‌ ಮೆಕೊನಿಯಮ್‌ ಪೆರಿಟೊನಿಟಿಸ್‌ ಎಂಬ ಖಾಯಿಲೆಯಿಂದ ಬಳಲುತ್ತ, ಜೆಜುನಲ್ ಅಟ್ರೆಸಿಯಾದೊಂದಿಗೆ ಚಿಕ್ಕದಾದ ಕರುಳು ಇರುವುದು ಕಂಡು ಬಂದಿತು. ಅಲ್ಲದೇ ಇದು ತೀವ್ರವಾದ ಸೆಪ್ಸಿಸ್‌ (ನಂಜು) ಗೆ ಕಾರಣವಾಗುವ ಇಂಟ್ರಾ ಅಬ್ಡೋಮಿನಲ್ ರೋಗಕ್ಕೆ ಕಾರಣವಾಗುತ್ತಿತ್ತು.

ಶಸ್ತ್ರಚಿಕಿತ್ಸೆಗೆ ಮೊದಲು ಶಿಶುವಿನ ಆರೋಗ್ಯಕ್ಕೆ ಅವಶ್ಯವಿರುವ ಎಂಡೋ-ಟ್ರಾಕಿಯಲ್ ಇಂಟ್ಯೂಬೇಷನ್ ಮಾಡಿ, ಪ್ಲೇಟ್‌ಲೆಟ್ ಮತ್ತು ಪ್ಲಾಸ್ಮಾ ರಕ್ತಪೂರಣ ನೆರವೇರಿಸಿ, ಅನಗತ್ಯವಾಗಿರುವ ಚೀಲವನ್ನು ತೆಗೆದುಹಾಕಿ, ಜೆಜುನಲ್‌ ಅಟ್ರೆಸಿಯಾವನ್ನು ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಸರಿಪಡಿಸಿ ಮಗುವಿನ ಪ್ರಾನವನ್ನು ಉಳಿಸಲಾಯಿತು. 

ಸುಮಾರು 20 ವರ್ಷಗಳ ಕಾಲ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸೆಯಲ್ಲಿ ನುರಿತಿರುವ ಡಾ. ಸಂತೋಷ ಕುರಬೆಟ್‌ ಅವರು ಇಂಥಃ ಕ್ಲಿಷ್ಟಕರವಾದ ಒಂದೇ ಬಾರಿಗೆ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದರು. 

ಸಾಮಾನ್ಯವಾಗಿ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸೆಯು 1-2 ಗಂಟೆ ಮಾತ್ರ ತೆಗೆದುಕೊಳ್ಳುತ್ತದೆ. ಕೇವಲ 7 ದಿನಗಳಲ್ಲಿ ಶಿಶು ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದೆ. ಈ ರೀತಿಯ ತೊಂದರೆಯಿಂದ ಜನ್ಮತಾಳಿದ ಶಿಶುಗಳಲ್ಲಿ ಕೆಲವೇ ಕೆಲವು ಪ್ರಕರಣಗಳು ಕಂಡು ಬಂದಿವೆ. 

ಅದರಲ್ಲಿಯೂ ಬದುಕುಳಿಯುವದು ವಿರಳ. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸಂತೋಷ್ ಬಿ ಕುರ್ಬೆಟ್ ನೇತೃತ್ವದ ತಂಡ ಮತ್ತು ನಂತರ ಆರೈಕೆ ಮಾಡಿದ ಡಾ. ರಾಮಚಂದ್ರ ಭಟ್, ಡಾ. ವಿನಾಯಕ್ ಜನ್ನು, ಡಾ. ಬೃಂದಾ ಕವಿ ಹಾಗೂ ನರ್ಸಿಂಗ್ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್‌ ಎಂ ದಯಾನಂದ, ಜೆಎನ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಕಾಹೆರನ ಉಪಕುಲಪತಿಗಳಾದ ಡಾ. ಎನ್‌ ಎಸ್‌ ಮಹಾಂತಶೆಟ್ಟಿ, ಕುಲಸಚಿವರಾದ ಡಾ. ವಿ. ಎಂ. ಪಟ್ಟಣಶೆಟ್ಟಿ ಮತ್ತು ಬೆಳಗಾವಿಯ ಕೆಎಹೆರ್ ಉಪಕುಲಪತಿ ಡಾ. ಎನ್. ಎಸ್. ಮಹಾಂತಶೆಟ್ಟಿ ಅವರು ಅಭಿನಂದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button