Kannada NewsKarnataka NewsLatest

*ವಸತಿ ಶಾಲೆಯ ಮಾಲೀಕನಿಂದಲೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ*

ಪತಿಯ ನೀಚ ಕೃತ್ಯಕ್ಕೆ ಪತ್ನಿಯೂ ಸಾಥ್

ಪ್ರಗತಿವಾಹಿನಿ ಸುದ್ದಿ: ವಸತಿ ಶಾಲೆಯೊಂದರಲ್ಲಿ ವಸತಿ ಶಾಲೆಯ ಮಾಲೀಕನೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ಎಸ್.ಎಲ್ ಎಸ್ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಸತಿ ಶಾಲೆಯ ಮಾಲೀಕ ಧನಂಜಯ್ ಮತ್ತು ಆತನ ಪತ್ನಿ ಶೈಲಜಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಸಹೋದರಿಯರ ಮೇಲೆ ಮಾಲೀಕ ಧನಂಜಯ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಧನಂಜಯ್ ರಾತ್ರಿವೇಳೆ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗೆ ತೆರಳಿ, ಒಮ್ಮೊಮ್ಮೆ ವಾರ್ಡನ್ ಕೊಠಡಿಗೆ ಕರೆಸಿ ಕಿರುಕುಳ ನೀಡುತ್ತಿದ್ದ. ತಾತನ ವಯಸ್ಸಾಗಿದ್ದರೂ ಪುಟ್ಟ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ್ದಾನೆ.


ಈತನ ಹಿಂಸೆ ಸಹಿಸಲಾಗದ ಮಕ್ಕಳು ಆತನ ಪತ್ನಿ ಶೈಲಜಾಗೆ ಈ ಬಗ್ಗೆ ಹೇಳಿದ್ದರು. ಆದರೆ ಆಕೆಯೂ ಗಂಡನ ನೀಚ ಕೃತ್ಯಕ್ಕೆ ಸಾಥ್ ನೀಡಿ, ಕಿರುಕುಳದ ಬಗ್ಗೆ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಳು.

ಮಾಲೀಕನ ಕಿರುಕುಳಕ್ಕೆ ನಲುಗಿ ಹೋಗಿದ್ದ ಬಾಲಕಿಯರನ್ನು 8 ದಿನಗಳ ಕಾಲ ಕೂಡಿ ಹಾಕಿ ದಂಪತಿ ಹಿಂಸಿಸಿದ್ದಾರೆ. ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದ ಕುರಿತು ಯಾರ ಬಳಿಯೂ ಹೇಳದಂತೆ ಒತ್ತಡ ಹೇರುತ್ತಿದ್ದರು. ಅದರಲ್ಲಿಯೂ ಪಾಲಕರಿಗೆ ಸುದ್ದಿ ಮುಟ್ಟಿಸಬಾರದೆಂದು ಹೊರಗೆ ಹೋಗಲೂ ಬಿಡದೆ, ಪೋಷಕರಿಗೆ ಕರೆ ಮಾಡಲೂ ಬಿಡದೆ ಕಿರುಕುಳ ನೀಡಿದ್ದರು. ನಿನ್ನೆ (ಫೆ.27) ಪೋಷಕರಿಗೆ ಕರೆ ಮಾಡಿದ ಬಾಲಕಿಯರು ತಮ್ಮ ಮೇಲಾದ ದೌರ್ಜನ್ಯವನ್ನು ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೆ ಶಾಲೆ ಬಳಿ ಬಂದ ಬಾಲಕಿಯರ ಪೋಷಕರು ದಂಪತಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಧ್ಯ ಆರೋಪಿ ಧನಂಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಸತಿ ಶಾಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇದರ ಮಾಲೀಕ ಧನಂಜಯ್ ಅನುದಾನ‌ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷನೂ ಆಗಿದ್ದಾನೆ. ಈತನ ಕುಕೃತ್ಯದಿಂದ ನೊಂದ ಬಾಲಕಿಯರಿಗೆ ಅವನ ಹೆಂಡತಿ ಪಪ್ಪಾಯ ತಿನ್ನಿಸಿದ್ದು, ತನಿಖೆ ವೇಳೆ ದಂಪತಿ ಈ ಎಲ್ಲಾ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button