ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಉಗ್ರರಿಗೆ ಆಶ್ರಯ ನೀಡಿದ್ದ ಜಮ್ಮು-ಕಾಶ್ಮೀರದ ಡಿವೈಎಸ್ಪಿ ದೇವಿಂದರ್ ಸಿಂಗ್ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ದೇವಿಂದರ್ ಸಿಂಗ್ ಅವರು ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದ ತನ್ನ ಮನೆಯಲ್ಲಿ ಮೂವರು ಉಗ್ರರಿಗೆ ಆಶ್ರಯ ನೀಡಿದ್ದರು. ಹಾಗಾಗಿ ದೇವೇಂದ್ರ ಸಿಂಗ್ರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಡಿವೈಎಸ್ಪಿ ದೇವಿಂದರ್ ಸಿಂಗ್ ಸೇರಿದಂತೆ ಇಬ್ಬರು ಉಗ್ರರ ಬಂಧನವಾಗಿತ್ತು. ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್– ಇ ತೊಯ್ಬಾ ಸಂಘಟನೆಗೆ ಸೇರಿದ ಉಗ್ರರಾದ ಸಯದ್ ನಾವೀದ್ ಮುಷ್ತಾಕ್, ರಫಿ ರಾಥೆರ್ ಎಂಬ ಇಬ್ಬರು ಉಗ್ರರ ಜತೆಗೆ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಕಳೆದ ವರ್ಷ ಆಗಸ್ಟ್ 15ರಂದು ಶೌರ್ಯ ಪ್ರಶಸ್ತಿ ಪಡೆದಿದ್ದ ದೇವಿಂದರ್ ಸಿಂಗ್, ವಿಚಾರಣೆ ವೇಳೆ ಸಯದ್ ನಾವೀದ್ ಮುಷ್ತಾಕ್, ರಫಿಯನ್ನು ಶರಣಾಗತಿಗೆಂದು ಪೊಲೀಸರಿಗೆ ಒಪ್ಪಿಸಲು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದೆ ಎಂದು ತಿಳಿಸಿದ್ದಾರೆ. ಆದರೆ, ಮುಷ್ತಾಕ್ ಮತ್ತು ರಫಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದಾಗ ಅವರು ಶರಣಾಗತಿಯ ಯಾವುದೇ ವಿಚಾರ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಅಲ್ಲದೇ ಉಗ್ರರನ್ನು ಸಾಗಿಸಲು ದೇವಿಂದರ್ 12 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಯ ಕಾರನ್ನು ಯಾರೂ ತಡೆದು ತಪಾಸನೆ ನಡೆಸುವುದಿಲ್ಲವಾದ್ದರಿಂದ ಅವರು ತಮ್ಮ ಕಾರಿನಲ್ಲೇ ಅವರನ್ನು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ