*ಸಂಭ್ರಮ ಸಡಗರದಿಂದ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಆಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಬೆಳಗಾವಿಯಲ್ಲಿ ಜೈನ ಸಮಾಜದ ವತಿಯಿಂದ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಲ್ಲಿ ಆಚರಿಸಲಾಯಿತು.
ಬೆಳಗಾವಿಯ ಟಿಳಕಚೌಕದಲ್ಲಿ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಶೋಭಾಯಾತ್ರೆಯ ಸಮಾರಂಭ ನಡೆಯಿತು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆದಾಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ನರೇಂದ್ರ ಜೈನ ಅವರು ಮಾತನಾಡಿ, ಬೆಳಗಾವಿಯಲ್ಲಿ ಜೈನ ಸಮಾಜ ಕಳೆದ 28 ವರ್ಷಗಳಿಂದ ಮಹೋತ್ಸವ ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದು, ಇಡಿ ದೇಶಕ್ಕೆ ಮಾದರಿಯಾಗಿದೆ .ಇದೆ ರೀತಿ ಈ ಮಹೋತ್ಸವ ಸಮಾರಂಭ ಮುಂದುವರೆಯಲಿ ಎಂದು ಹಾರೈಸಿದರು.
ಮಾಜಿ ಶಾಸಕ ಅನಿಲ ಬೆನಕೆ ಅವರು ಮಾತನಾಡಿ, ಜೈನ ಸಮಾಜ ಬಾಂಧವರು ತನು,ಮನ , ಧನದಿಂದ ಈ ಆಚರಣೆ ನಡೆಸುತ್ತಿದ್ದು ಇತರೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕ ಅಭಯ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮೋದ ಪಾಟೀಲ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆ ಮೇಲೆ ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಾಲಿ, ಸುನಿಲ ಹಣಮನ್ನವರ, ರಾಜೇಂದ್ರ ಜೈನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ತದ ನಂತರ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ಈ ಶೋಭಾ ಯಾತ್ರೆಯು ಟಿಳಕಚೌಕ, ಶೇರಿ ಗಲ್ಲಿ, ಶನಿ ಮಂದಿರ, ಎಸ.ಪಿ.ಎಂ ರೋಡ, ಕೋರೆ ಗಲ್ಲಿ, ಶಹಾಪೂರ, ಬಸವೇಶ್ವರ ವೃತ್ತ ದ ಮುಖಾಂತರ ಮಹಾವೀರ ಭವನಕ್ಕೆ ತಲುಪಿತು .ಈ ಶೋಭಾ ಯಾತ್ರೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸ್ತಬ್ದ ಚಿತ್ರರಥಗಳು ಭಾಗವಹಿಸಿ ಭಗವಾನ ಮಹಾವೀರರ ಸಂದೇಶ ವನ್ನು ಸಾರುವ ದೃಶ್ಯ ವನ್ನು ಪ್ರದರ್ಶಿಸಿದರು. ಮಹಾವೀರ ಭವನದಲ್ಲಿ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿವರಿಸಲಾಯಿತು.


