ಪ್ರಗತಿವಾಹಿನಿ ಸುದ್ದಿ; ಮೈಸೂರು: ಸಚಿವಾಕಾಂಕ್ಷಿಗಳ ಋಣ ತೀರಿಸುವುದು ನಮ್ಮ ಕರ್ತವ್ಯ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ. ಅದು ಸಚಿವರನ್ನಾಗಿ ಮಾಡುವುದು ಅಥವಾ ಸ್ಥಾನ ಕೊಡುವುದಲ್ಲ. ಅವರ ಋಣವನ್ನು ನಾವು ತೀರಿಸಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವಾಕಾಂಕ್ಷಿಗಳ ವಿರುದ್ದ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ. ಟೀಕೆ ಮಾಡುತ್ತಿರುವವರು ಬಾಯಿ ಮುಚ್ಚಿಕೊಂಡಿರಬೇಕು. ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ಅಮಿತ್ ಶಾ ಭೇಟಿ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ ನದ್ದು ಅಯೋಗ್ಯ ಸರ್ಕಾರ ಎಂದು ರಾಜ್ಯದ ಜನರು ಮನೆಯಲ್ಲಿ ಕೂರಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನವಿರೋಧಿ ಕೆಲಸ ಮಾಡಿದರು. ಜಾತಿ, ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ರು. ಹಾಗಾಗಿ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ ಎಂದು ಕಿಡಿಕಾರಿದರು.
ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಸಿನಮಾ ಮಾಡಿಕೊಂಡು ಇರಲಿ ಸಾಕು. ಕುಮಾರಸ್ವಾಮಿ ಸಿಎಂ ಆಗಿದ್ದವರು ಅವರ ಸ್ಥಾನಕ್ಕೆ ತಕ್ಕಂತೆ ಪದ ಬಳಕೆ ಮಾಡಬೇಕು. ಅಷ್ಟು ಮಾತ್ರ ನಾನು ಹೇಳಬಲ್ಲೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ