Kannada NewsKarnataka NewsLatestPolitics

*ಶಾಮನೂರು ಶಿವಶಂಕರಪ್ಪನವರ ಸೇವೆಯನ್ನು ಕಾಂಗ್ರೆಸ್ ಪಕ್ಷ ಮರೆಯಲು ಸಾಧ್ಯವಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಶಾಮನೂರು ಶಿವಶಂಕರಪ್ಪನವರ ಸೇವೆಯನ್ನು ಕಾಂಗ್ರೆಸ್ ಪಕ್ಷ ಮರೆಯಲು ಸಾಧ್ಯವಿಲ್ಲ, ಅವರೊಬ್ಬ ಹೃದಯ ಶ್ರೀಮಂತ ವ್ಯಕ್ತಿ ಆಗಿದ್ದರು. ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಪಂಚಮಸಾಲಿ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಸಚಿವರು, ಹಿರಿಯರ ಮಾರ್ಗದರ್ಶನ ಪಕ್ಷಕ್ಕೆ ಬೇಕು, ಯುವಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಬರಬೇಕು ಎಂದರು.

ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಅಲೆ ಕ್ಷೇತ್ರದಲ್ಲಿ ಕಾಣುತ್ತಿದೆ. ಸಮರ್ಥ್ ಮಾತು ನೋಡಿದರೆ ತುಂಬಾ ತಿಳುವಳಿಕೆ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಯುವಕ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಸಮರ್ಥ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಶಾಸಕರು, ಸಂಸದರು ನಿಧನರಾದರೆ, ಮೃತರ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್ ಶಾಮನೂರಿಗೆ ಟಿಕೆಟ್ ನೀಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ಗ್ರಾಮ ಪಂಚಾಯತಿ ಚುನಾವಣೆ ಇರಲಿ, ಸಂಸತ್ ಚುನಾವಣೆಯೇ ಇರಲಿ ನಾವು ಲಘುವಾಗಿ ಪರಿಗಣಿಸಲ್ಲ. ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಬೇಕು, ಇದಕ್ಕೆ ಹಲವು ಕಾರಣಗಳಿವೆ. ಪಕ್ಷದಲ್ಲಿ ಸಾಕಷ್ಟು ಟಿಕೆಟ್ ಆಕಾಂಕ್ಷಿಗಳು ಇದ್ದರು. ಆದರೆ ಕೆಲ ಮಾಧ್ಯಮಗಳಿಂದ ಮಾತ್ರ ಟಿಕೆಟ್ ಗಾಗಿ ಗೊಂದಲ ಇದೆ ಅಂತ ಸುದ್ದಿ ಆಯಿತು ಎಂದರು.

ಚುನಾವಣೆ ಪರೀಕ್ಷೆಯಲ್ಲಿ ಸಮರ್ಥ್ ಗೆದ್ದು ಬರುತ್ತಾನೆ. ಹಿರಿಯರ ಮಾರ್ಗದರ್ಶನ ಪಕ್ಷಕ್ಕೆ ಬೇಕು, ಯುವಕರು ಪಕ್ಷಕ್ಕೆ ಬೇಕು. ವೀರಶೈವ ಲಿಂಗಾಯತ ಸಮಾಜದ ಯುವಕರು ಹೆಚ್ಚು ರಾಜಕೀಯಕ್ಕೆ ಬರಬೇಕು. ಎರಡು ವರ್ಷ ಸಮರ್ಥ್ ಗೆ ಅವಕಾಶ ಮಾಡಿಕೊಡಿ, ಅವಕಾಶ ನೀಡುವ ಮೂಲಕ ಆಶೀರ್ವಾದ ಮಾಡಿ, ಶಾಮನೂರು ಮನೆತನದ ಕುಡಿಗೆ ಅವಕಾಶ ಕೊಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪಕ್ಷಾತೀತವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಮನೆ ಮನೆಗೂ ಪಂಚ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ ಎಂದರು.

ಕಾಂಗ್ರೆಸ್ ಪಕ್ಷದ ಜೊತೆ ವೀರಶೈವ ಲಿಂಗಾಯತರು‌ ಇಲ್ಲ ಅಂತ ಹೇಳುತ್ತಾರೆ‌. ಆದರೆ, ಕಳೆದ ಬಾರಿಯ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ವೀರಶೈವ ಲಿಂಗಾಯತ ಸಮಾಜವೇ ಕಾರಣ, ಕಾಂಗ್ರೆಸ್ ಪಕ್ಷ ಬಸವಣ್ಣನವರ ತತ್ವ ಸಿದ್ದಾಂತವನ್ನು ಅಳವಡಿಸಿಕೊಂಡಿದೆ‌ ಎಂದರು‌.

ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು, ಶಾಸಕ ಜಿ.ಎಸ್. ಪಾಟೀಲ್, ಮಾಜಿ ಶಾಸಕ ಗಡ್ಡದೇವರಮಠ, ಕಾಂಗ್ರೆಸ್ ಯುವ ಮುಖಂಡ ಎಚ್.ಎಸ್. ನಾಗರಾಜ್, ಮಾಜಿ ಕಾರ್ಪೋರೇಟರ್ ರುದ್ರಮ್ಮ, ಮುಖಂಡರಾದ ಟಿ.ಮುರುಗೇಶ್, ಚಂದ್ರಮ್ಮ, ಹನುಮಂತಪ್ಪ, ಅಶೋಕ್ ಗೋಪಣ್ಣನವರ ಸೇರಿದಂತೆ ಪಂಚಮಸಾಲಿ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

Back to top button