Kannada NewsKarnataka NewsLatest

ಕರ್ನಾಟಕ ನೀಡಿದ ಸೌಲಭ್ಯದ ಒಂದಂಶವನ್ನೂ ಮಹಾರಾಷ್ಟ್ರ ನೀಡಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಹಾರಾಷ್ಟ್ರದ ಶಿವಸೇನೆ ನಾಯಕ ಹಾಗೂ ರಾಜ್ಯಸಭೆಯ ಸದಸ್ಯ  ಸಂಜಯ ರಾವತ ಅವರು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಈ ಹೇಳಿಕೆಗೆ ತಿರುಗೇಟು ನೀಡದ ಕರ್ನಾಟಕ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಬೆಳಗಾವಿ ಗಡಿಭಾಗದಲ್ಲಿಯ ಮರಾಠಿಗರಿಗೆ ಅನ್ಯಾಯವಾಗುತ್ತಿದೆ, ಮರಾಠಿಗರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ, ಮರಾಠಿಗರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ, ಗಡಿಭಾಗದ ಮರಾಠಿಗರ ಭಾವನೆಗಳನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗೆ ವಿವರಿಸುತ್ತೇನೆ ಎಂದು ಇತ್ತಿಚೀಗೆ ಬೆಳಗಾವಿಗೆ ಭೆಟ್ಟಿ ನೀಡಿದ ಸಂದರ್ಭದಲ್ಲಿ ಹೇಳುವ ಮೂಲಕ ಹಸಿ ಸುಳ್ಳುಗಳನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಾಧ್ಯಮಗಳಲ್ಲಿ ಬಿತ್ತಿ ಹೋಗಿದ್ದಾರೆ.

ಗಡಿಭಾಗದಲ್ಲಿರುವ ಎಂ.ಇ.ಎಸ್. ಹಾಗೂ ಶಿವಸೇನೆ ನಾಯಕರ ಮಾತು ಕೇಳಿ ರಾವತ ಅವರು ಇಂಥಹ ಗೂಬೆಲ್ಸ್ ಪ್ರಚಾರವನ್ನು ಮಾಡಿದ್ದು ಅವರು ಮಾಡಿದ ಅಪಪ್ರಚಾರಕ್ಕೆ ಎದುರೇಟು ಕೊಡುವಂಥಹ ವ್ಯವಸ್ಥೆಯು ಸಹ ಕರ್ನಾಟಕ ಸರಕಾರದಲ್ಲಿ ಇಲ್ಲದಿರುವುದು ಸದ್ಯ ಗಡಿಬಾಗದಲ್ಲಿರುವ ರಾಜ್ಯ ಸರಕಾರದ ದಿವ್ಯ ನಿರ್ಲಕ್ಷ್ಯ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ.

ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾಗುವ ಶೈಕ್ಷಣಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಹೋಲಿಸಿದಲ್ಲಿ ಕರ್ನಾಟಕವು ನೀಡಿದ ಸೌಲಭ್ಯದ ಒಂದು ಪ್ರತಿಶತದಷ್ಟೂ ಸೌಲಭ್ಯವನ್ನು ಮಹಾರಾಷ್ಟ್ರದ ಕನ್ನಡಿಗರಿಗೆ ನೀಡಲಾಗಿಲ್ಲ. ಮಹಾರಾಷ್ಟ್ರದ ಅಚ್ಚ ಕನ್ನಡ ಪ್ರದೇಶಗಳಾದ ಸೊಲ್ಲಾಪುರ, ಜತ್ತ ಹಾಗೂ ಅಕ್ಕಲಕೋಟೆಗಳಲ್ಲಿ ಕನ್ನಡವನ್ನು ಹಾಗೂ ಕನ್ನಡ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಲಾಗುತ್ತಿದೆ. ಅಲ್ಲಿಯ ಅಂಗಡಿ ಮುಂಗಟ್ಟುಗಳ ಹಾಗೂ ವಾಣಿಜ್ಯ ಸಂಸ್ಥೆಗಳ ಮೇಲಿನ ನಾಮಫಲಕಗಳಲ್ಲಿ ಕನ್ನಡವನ್ನು ಬರೆಸದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗುತ್ತಿದೆ.

ಆದರೆ ಕರ್ನಾಟಕದ ಗಡಿಭಾಗದಲ್ಲಿರುವ ಮರಾಠಿಗರಿಗೆ ಕಳೆದ ಐದು ದಶಕಗಳಲ್ಲಿ ನೂರಾರು ಮರಾಠಿ ಮಾಧ್ಯಮ ಶಾಲೆಗಳನ್ನು ಒದಗಿಸಲಾಗಿದೆ. ಬೆಳಗಾವಿ, ಖಾನಾಪುರ ತಾಲೂಕುಗಳ ಕೆಲವು ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಮಾಧ್ಯಮಿಕ ಶಾಲೆಗಳ ಸ್ಥಾಪನೆಗೆ ಕನ್ನಡಿಗರು ಹೋರಾಟ ನಡೆಸಬೇಕಾದ ದುಸ್ಥಿತಿಯಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕೇವಲ ೫೫ ಮಾತ್ರ. ಬೆಳಗಾವಿ ನಗರದಲ್ಲಿ ೪೪ ಸರಕಾರಿ, ೧೦ ಅನುದಾನಿತ, ೭ ಅನುದಾನ ರಹಿತ ಮರಾಠಿ ಪ್ರಾಥಮಿಕ ಶಾಲೆಗಳಿವೆ. ೩ ಸರಕಾರಿ, ೨೩ ಅನುದಾನಿತ, ೪ ಅನುದಾನ ರಹಿತ ಮರಾಠಿ ಮಾಧ್ಯಮಿಕ ಶಾಲೆಗಳಿವೆ.

ಬೆಳಗಾವಿ ತಾಲೂಕಿನಲ್ಲಿ ೧೦೭ ಸರಕಾರಿ, ೨ ಅನುದಾನಿತ, ೬ ಅನುದಾನ ರಹಿತ ಮರಾಠಿ ಪ್ರಾಥಮಿಕ ಶಾಲೆಗಳಿವೆ. ೧ ಸರಕಾರಿ, ೫೦ ಅನುದಾನಿತ, ೮ ಅನುದಾನ ರಹಿತ ಮರಾಠಿ ಮಾಧ್ಯಮಿಕ ಶಾಲೆಗಳಿವೆ. ಖಾನಾಪೂರ ತಾಲೂಕಿನಲ್ಲಿ ೨೧೭ ಸರಕಾರಿ, ೩ ಅನುದಾನಿತ, ೧ ಅನುದಾನ ರಹಿತ ಪ್ರಾಥಮಿಕ ಶಾಲೆಗಳಿವೆ. ೪ ಸರಕಾರಿ, ೨೮ ಅನುದಾನಿತ ಹಾಗೂ ೨ ಅನುದಾನ ರಹಿತ ಮರಾಠಿ ಮಾಧ್ಯಮಿಕ ಶಾಲೆಗಳಿವೆ.

ಹೀಗೆ ಬೆಳಗಾವಿ ಹಾಗೂ ಖಾನಾಪುರ ತಾಲೂಕುಗಳಲ್ಲಿ ಒಟ್ಟು ೩೯೭ ಮರಾಠಿ ಪ್ರಾಥಮಿಕ ಶಾಲೆಗಳು ಹಾಗೂ ೧೨೩ ಮರಾಠಿ ಪ್ರೌಡ ಶಾಲೆಗಳಿವೆ. ಈ ಪ್ರಮಾಣಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿಯ ಕನ್ನಡಿಗರಿಗೆ ತಮ್ಮ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಲು ಅಲ್ಲಿಯ ಸರಕಾರ ಎಳ್ಳಷ್ಟೂ ಸೌಲಭ್ಯಗಳನ್ನು ಒದಗಿಸಿಲ್ಲ. ಸಂಜಯ ರಾವತ ಅವರು ಕರ್ನಾಟಕದ ಗಡಿಭಾಗದ ಬಗ್ಗೆ ಮಾತನಾಡುವ ಮೊದಲು ಮಹಾರಾಷ್ಟ್ರದ ಗಡಿಭಾಗದಲ್ಲಿಯ ಕನ್ನಡಿಗರಿಗೆ ಒದಗಿಸಿದ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು.

ಕರ್ನಾಟಕ ಹಾಗೂ ಮಹಾರಾಷ್ಟರದ ಮುಖ್ಯಮಂತ್ರಿಗಳ ನಡುವೆ ಮಾತುಕತೆ ಏರ್ಪಡಿಸಲು ತಾವು ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿಕೆ ನೀಡಿರುವ ರಾವತ ಅವರು ತಮ್ಮ ಮಾತಿಗೆ ಬದ್ಧರಾಗಿರಬೇಕು. ಉಭಯ ರಾಜ್ಯಗಳ ಮಧ್ಯೆ, ಗಡಿವಿವಾದ ಹೊರತಾಗಿಯೂ, ಅನೇಕ ವಿಷಯಗಳ ಸಂಬಂಧ ಸೌಹಾರ್ದ ವಾತಾವರಣವನ್ನು ನಿರ್ಮಿಸುವ ಅವಶ್ಯಕತೆಯನ್ನು ರಾವತ್ ಅವರು ಅರಿತುಕೊಳ್ಳಬೇಕು.

ಗಡಿವಿವಾದವನ್ನು ಕೇಂದ್ರ ಗೃಹ ಸಚಿವರು ಬಗೆಹರಿಸಬೇಕೆಂದು ಸವಾಲು ಹಾಕಿರುವ ರಾವತ್ ಅವರು, ಸುಪ್ರೀಮ್ ಕೋರ್ಟ್ ಮುಂದಿರುವ ಗಡಿವಿವಾದ ಪ್ರಕರಣವನ್ನು ಸಮರ್ಥವಾಗಿ ಎದುರಿಸಲು ಅಂತಾರಾಷ್ಟ್ರೀಯ ಖ್ಯಾತಿಯ ನ್ಯಾಯವಾದಿ ಹರೀಶ ಸಾಳ್ವೆ ಅವರನ್ನು ಮಹಾರಾಷ್ಟ್ರದ ಪರವಾಗಿ ನೇಮಿಸಲಾಗಿದೆಯೆಂದೂ ಹೇಳುತ್ತಾರೆ. ಅವರ ಈ ಹೇಳಿಕೆಗಳಲ್ಲಿಯೇ ದ್ವಂದ್ವವಿದೆ. ನ್ಯಾಯಾಲಯದ ಹೊರಗೆ ಗಡಿವಿವಾದವನ್ನು ಬಗೆಹರಿಸುವ ಇರಾದೆ ರಾವತ್ ಹಾಗೂ ಅವರ ಸರಕಾರಕ್ಕೆ ಇದ್ದಲ್ಲಿ ಸುಪ್ರೀಮ್ ಕೋರ್ಟಿನಲ್ಲಿ ದಾಖಲಿಸಿರುವ ಪ್ರಕರಣವನ್ನು ಈ ಕೂಡಲೇ ವಾಪಸ್ ಪಡೆಯಲಿ ಎಂದು ಚಂದರಗಿ ಹೇಳಿಕೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button