Belagavi NewsBelgaum NewsKannada NewsKarnataka News

*ಸಮಾನತೆಗೆ ಸ್ಪಷ್ಟ ಚೌಕಟ್ಟು ಕಲ್ಪಿಸಿದವರು ಡಾ. ಬಿ.ಆರ್ ಅಂಬೇಡ್ಕರ್ : ಡಾ.ಸಿ.ಎಸ್ ದ್ವಾರಕಾನಾಥ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಭಾರತದ ಸಂವಿಧಾನವು ಕೇವಲ ಮನುಷ್ಯ ಕೇಂದ್ರಿತ ಅಲ್ಲ, ಬದಲಿಗೆ ಅದು ಜೀವ ಕೇಂದ್ರಿತವಾಗಿದೆ.  ಡಾ. ಬಿ. ಆರ್. ಅಂಬೇಡ್ಕರ್ ಅವರು ಈ ಸಂವಿಧಾನದ ಮೂಲಕ ಸಮಾನತೆಗೆ ಒಂದು ಸ್ಪಷ್ಟವಾದ ಚೌಕಟ್ಟು ನೀಡಿದರು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಮತ್ತು ಹಿರಿಯ ವಕೀಲ ಡಾ.ಸಿ.ಎಸ್. ದ್ವಾರಕಾನಾಥ್ ಹೇಳಿದರು. 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠ, ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕುವೆಂಪು ಸಭಾಭವನದಲ್ಲಿ ನಡೆದ ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಅಂಬೇಡ್ಕರ್ ಪರಂಪರೆಯ ಪುನರ್ವಿಮರ್ಶೆ ಮತ್ತು ಅಂಬೇಡ್ಕರ್ ಅವರ ಭಾರತದ ಮರುಕಲ್ಪನೆ ವಿಷಯದ ಮೇಲೆ ಮಾತನಾಡಿದ ಅವರು, ಭಾರತದಲ್ಲಿ ಅನೇಕ ನಾಯಕರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಭಾರತದ ಆತ್ಮವನ್ನು ಅರಿತಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರು ದೇಶದಲ್ಲಿನ ಜಾತಿ ಪದ್ಧತಿ ತೊಲಗಿಸಿ, ಆರ್ಥಿಕ ಸಮಾನತೆಯನ್ನು ತರಲು ಜೀವನವಿಡೀ ಶ್ರಮಿಸಿದರು. ಸಂವಿಧಾನದ ಪ್ರತಿಯೊಂದು ಅನುಚ್ಛೇದ  ಅವರ ಪ್ರತಿಪಾದನೆಯನ್ನು ತಿಳಿಸುತ್ತದೆ ಎಂದು ಹೇಳಿದರು.

ಡಾ. ಬಿ. ಆರ್. ಅಂಬೇಡ್ಕರ್ ಅವರು ಜಗತ್ತಿನ ಅತಿಶ್ರೇಷ್ಠ ಮಹಿಳಾವಾದಿ ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನ ಭತ್ಯೆ ದೊರಕಿಸಿಕೊಡುವಲ್ಲಿ ಮತ್ತು ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಲು ಧ್ವನಿ ಎತ್ತಿದ್ದನ್ನು ನಾವು ಮರೆಯಬಾರದು. ಅವರು ಒಬ್ಬ ಸಮಾಜ ಸುಧಾರಕರಿಗಿಂತ ಸಮಾಜ ಪರಿವರ್ತಕ ಎಂಬುದನ್ನು ನಾವು ನೆನೆಯಬೇಕು ಎಂದು ಹೇಳಿದರು. 

Home add -Advt

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾದ್ಯಾಪಕ, ಡಾ. ಅಶ್ವಥ್ ನಾರಾಯಣ್ ಮಾತನಾಡಿ, ಭಾರತದ ಚರಿತ್ರೆಗೆ ಹೊಸ ಆಯಾಮವನ್ನ ನಿರೂಪಿಸಿ ಮತ್ತು ಸಾಮಾಜಿಕ ಇತಿಹಾಸಕ್ಕೆ ಹೊಸ ಚೌಕಟ್ಟನ್ನು ಸೃಷ್ಟಿಸಿದ ಕೀರ್ತಿ ಡಾ. ಬಿ. ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅವರು ಇಡೀ ಭಾರತದ ಆತ್ಮ ಮತ್ತು ಹೃದಯವನ್ನು ಸಂವಿಧಾನೀಕರಣಗೊಳಿಸಿದರು, ಅದರ ಹಿಂದಿನ ಪರಿಶ್ರಮವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. 

ವಿಧ್ಯಾರ್ಥಿಗಳು ಅಂಬೇಡ್ಕರ್ ಅವರ ಬಗ್ಗೆ ಆಳವಾಗಿ ಓದುವ ಮೂಲಕ ಅವರನ್ನು ತಿಳಿಯಬೇಕು ಹೊರತು ಅವರ ಭಾಷಣಗಳಿಂದಲ್ಲ, ಅವರ ಬಗೆಗಿನ ಓದು ನಮ್ಮಲ್ಲಿ ಹೊಸ ಆಲೋಚನೆಗಳನ್ನು ಹುಟ್ಟಿಸುತ್ತದೆ ಆಗ ನಾವು ಅವರ ವಿಚಾರಗಳೊಂದಿಗೆ ಅನುಸಂಧಾನ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕುಲಪತಿ ಪ್ರೊ .ಸಿ. ಎಮ್ ತ್ಯಾಗರಾಜ ಮಾತನಾಡಿ, ಡಾ ಬಿ. ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವ ನಿಜಕ್ಕೂ ಅನಂತಸ್ಪರ್ಶಿ. ನಮ್ಮ ದೇಶದ 142 ಕೋಟಿ ಜನಸಂಖ್ಯೆಯ ಆಶೋತ್ತರಗಳನ್ನು ಈಡೇರಿಸುವ ಏಕೈಕ ಮಾರ್ಗ ಸಂವಿಧಾನ. ಎಲ್ಲ ಕಾಲಘಟ್ಟಗಳಿಗೂ ಅಂಬೇಡ್ಕರ್ ಅವರ ಚಿಂತನೆ ಹರಡಬೇಕು ಎಂದು ಹೇಳಿದರು. ಕುಲಸಚಿವ ಸಂತೋಷ್ ಕಾಮಗೌಡ ಮಾತನಾಡಿದರು. 

ಕಾರ್ಯಕ್ರಮದಲ್ಲಿ “ಮನೆ ಮನೆಗೂ ಮನ ಮನಕೂ ಡಾ.ಬಿ.ಆರ್.ಅಂಬೇಡ್ಕರ್” ಪುಸಕ್ತವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ .ಡಿ ಎನ್ ಪಾಟೀಲ್, ಹಣಕಾಸು ಅಧಿಕಾರಿ ಎಂ.ಎ ಸ್ವಪ್ನ, ಅಂಬೇಡ್ಕರ್ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ. ಅಶೋಕ್ ಡಿಸೋಜಾ, ಸಂಚಾಲಕರಾದ ಡಾ. ಮಹೇಶ್ ಕುಮಾರ್ ಎನ್, ಡಾ. ಅಶ್ವಿನಿ ಜಾಮುನಿ, ಎಲ್ಲ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ  ಸಿಬ್ಬಂದಿಗಳು ಸೇರಿದಂತೆ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button