Latest

ಪಂಚಕಲ್ಯಾಣ ಮಹೋತ್ಸವ : ತೀರ್ಥಂಕರರ ಭವ್ಯ ರಥೋತ್ಸವ

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಹಿಂದವಾಡಿಯಲ್ಲಿನ ಜೈನ ಬಸದಿಯ ನೂತನೀಕರಣ ಮತ್ತು ಶ್ರೀ ೧೦೦೮ ಚಂದ್ರಪ್ರಭ, ಆದಿನಾಥ ಹಾಗೂ ೨೪ ತೀಥಂಕರರ ಪಂಚಕಲ್ಯಾಣ ಮಹಾ ಮಹೋತ್ಸವದ ನಾಲ್ಕನೇಯ ದಿನವಾದ ಬುಧವಾರ ತೀರ್ಥಂಕರರ ಭವ್ಯ ರಥೋತ್ಸವ ಕಾರ್ಯಕ್ರಮ ಜರುಗಿತು.
ಬುಧವಾರ ಸಾಯಂಕಾಲ ನಡೆದ ಈ ರಥೋತ್ಸವದ ಮೆರವಣಿಗೆಯಲ್ಲಿ ಆನೆ, ಕುದುರೆ ಹಾಗೂ ಬೆಳ್ಳಿ ರಥಗಳಲ್ಲಿ ತೀರ್ಥಂಕರರ ಭವ್ಯ ಮೆರವಣಿಗೆ ನಡೆಯಿತು. ಹಿಂದವಾಡಿ ಜೈನ ಬಸದಿಯಿಂದ ಪ್ರಾರಂಭವಾದ ರಥೋತ್ಸವ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಕೊನೆಯಲ್ಲಿ ಜೈನ ಬಸದಿಯಲ್ಲಿಯೇ ಮುಕ್ತಾಯಗೊಂಡಿತು. ರಥೋತ್ಸವ ಮೆರವಣಿಗೆಯಲ್ಲಿ ವಿವಿಧ ವಾದ್ಯಗಳು, ಸಂಗೀತಾರತಿ ನುಡಿಸಲಾಗುತ್ತಿತ್ತು. ಈ ಸುಮಧರ ಸಂಗೀತಕ್ಕೆ ಭಕ್ತಾದಿಗಳು ಹೆಜ್ಜೆ ಹಾಕಿದರು.
ಬುಧವಾರ ಬೆಳಿಗ್ಗೆ ಮಂಗಲವಾದ್ಯದ ಮೂಲಕ ಚಾಲನೆ ಪಡೆದು, ಕ್ರಮೇಣವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಯಜಮಾನರ ಆಗಮನ, ಮಂಗಲ ಕುಂಭಾನಯನ, ನಿತ್ಯ ವಿಧಿ, ಪಂಚಾಮೃತ ಅಭಿಷೇಕ, ಶಾಂತಿ ಮಂತ್ರ, ತೀರ್ಥಂಕರ ಮಹಾಮುನಿ ಅವಸ್ಥೆಯಲ್ಲಿ ಆಹಾರ ವಿಧಿ, ಕೇವಲಜ್ಞಾನ ಸಂಸ್ಕಾರ ವಿಧಿ, ಕೇವಲಜ್ಞಾನ ಕಲ್ಯಾಣ ಪುಜಾ, ಧಮಸಭಾ, ಪ್ರವಚನ ಸವಾಲ ಕಾರ್ಯಕ್ರಮ, ಸಮವಶರಣ ರಚನಾ, ಸಭಾ ದಿವ್ಯಧ್ವನಿ, ಪ್ರಶ್ನೋತ್ತರ ಕಾರ್ಯಕ್ರಮಗಳು ನಡೆದವು.
ಮಂಗಳವಾರ ಸಾಯಂಕಾಲ ನಡೆದ ರಾಜ್ಯಭಿಷೇಕ ಕಾರ್ಯಕ್ರಮದಲ್ಲಿ ೫೬ ದೇಶಗಳ ರಾಜರಿಂದ ಕಾಣಿಕೆ ಅರ್ಪಣೆ, ಕಿಮಿಚ್ಛಕದಾನ, ದರಬಾರಿ ನೃತ್ಯ, ವೈರಾಗ್ಯಭಾವನಾ, ಲೌಕಾಂತಿಕದೇವರ ಆಗಮನ, ವೈರಾಗ್ಯಸ್ತುತಿ, ದೀಕ್ಷಾವನ ಕಡೆ ಪ್ರಸ್ತಾನ, ದೀಕ್ಷಾ ಕಲ್ಯಾಣ ಸಂಸ್ಕಾರ ವಿಧಿ, ಹಾಗೂ ಭಗವಾನ ಚಂದ್ರಪ್ರಭ ಪಂಚಕಲ್ಯಾಣ ನಾಟಕ ಕಾರ್ಯಕ್ರಮಗಳು ನಡೆದವು. ಸ್ವಾದಿ (ಸೋಂದಾ) ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟು ಅವುಗಳ ಮಹತ್ವ ತಿಳಿಸಿಕೊಟ್ಟರು.
ಶ್ರೀ ೧೦೮ ಆಚಾರ್ಯ ಧರ್ಮಸೇನ ಮತ್ತು ಶ್ರೀ ೧೦೫ ಕ್ಷುಲ್ಲಕ ಚಂದ್ರಸೇನ ಮಹಾರಾಜ, ಡಾ. ಲಕ್ಷ್ಮೀಸೇನ ಭಟ್ಟಾರಕ ಸ್ವಾಮಿಜಿ ಕೊಲ್ಲಾಪುರ ಇವರ ಸಾನಿಧ್ಯದಲ್ಲಿ ಹಾಗೂ ಪ್ರತಿಷ್ಠಾಚಾರ್ಯ ಪಂಡಿತ ವೃಷಭಸೇನ ಉಪಾಧ್ಯೆ , ಸಹ ಪ್ರತಿಷ್ಠಾಚಾರ್ಯ ಪಂಡಿತ ಪಾರೀಸ ಉಪಾಧ್ಯೆ, ಪಂಡಿತ ಸಂಜೀವ ಉಪಾಧ್ಯೆ ಮತ್ತು ಉದಯಕುಮಾರ್ ಉಪಾಧ್ಯೆ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು.
ಸೌಧರ್ಮ ಇಂದ್ರ-ಇಂದ್ರಾಣಿ ಸವಿತಾ ಮತ್ತು ಅರ್ಜುನ ಭಾಗಣ್ಣವರ, ಈಶಾನ್ಯ ಇಂದ್ರ-ಇಂದ್ರಾಣಿ ಪ್ರಮಿಳಾ ಮತ್ತು ಅಪ್ಪಾಸಾಹೇಬ ಕಬ್ಬುರ, ತೀರ್ಥಂಕರ ಮಾತಾ-ಪಿತಾ ಪದ್ಮಜಾ ಮತ್ತು ಶೀತಲಕುಮಾರ ನಿಲಜಗಿ, ಧನಪತಿ ಕುಬೇರ ಸವಿತಾ ಮತ್ತು ಶ್ರೀಧರ ಪತ್ರಾವಳಿ, ಮಹಾಯಜ್ಞ ನಾಯಕ ಸುಕನ್ಯಾ ಮತ್ತು ಅನಂತರಾಜ ಸೂಜಿ, ಸುವರ್ಣ ಸೌಭಾಗ್ಯವತಿ ರಾಜಶ್ರೀ ಮತ್ತು ಮಹಾವೀರ ಗಣಿ , ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಉದ್ಯಮಿ ಬಾಳಾಸಾಹೇಬ ಪಾಟೀಲ, ಪಂಚಕಲ್ಯಾಣ ಮಹಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಮಹಿಳಾ ಮಂಡಳದ ಸದಸ್ಯರು, ಶ್ರಾವಕ – ಶ್ರಾವಕಿಯರು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button