Kannada NewsKarnataka NewsLatest

*ಆಕೆಯೇ ಬೇಕೆಂದು ಕಾಡಿ ಬೇಡಿ ವಿವಾಹವಾದ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಗೆ ಹಿಂಸಿಸುತ್ತಿದ ಪತಿ: ಮದುವೆಯಾದ ವರ್ಷದೊಳಗೆ ನವವಿವಾಹಿತೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮದುವೆಯಾದ ವರ್ಷದೊಳಗೆ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ಈ ಘಟನೆ ನಡೆದಿದೆ. ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ನವವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮೇ 15ಕ್ಕೆ ಮದುವೆಯ ವಾರ್ಷಿಕೋತ್ಸವವಾಗಿತ್ತು. ಆದರೆ ಅದಕ್ಕೂ ಮೊದಲೇ ನವವಿವಾಹಿತೆ ಸಾವಿಗೆ ಶರಣಾಗಿದ್ದಾಳೆ.

ಪ್ರೇಮಾ ಆತ್ಮಹತ್ಯೆ ಮಾಡಿಕೊಂಡವರು. ಗೌರಿಬಿದನೂರು ಮೂಲದ ಶಕುಂತಲಾ ಎಂಬುವರ ಪುತ್ರಿ ಪ್ರೇಮಾ ಹಾಗೂ ಶಿಡ್ಲಘಟ್ಟದ ಜಂಗಮಕೋಟೆಯ ಶಿವಕುಮಾರ್ ಪರಸ್ಪರ ಸಂಬಂಧಿಕರು. ಪ್ರೇಮಾಳನ್ನು ಶಿವಕುಮಾರ್ ಕಾಡಿ ಬೇಡಿ ಮದುವೆಯಾಗಿದ್ದ. ಮದುವೆಯಾದ ಮೊದಲ ಮೂರು ತಿಂಗಳು ದಂಪತಿ ಸುಖವಾಗಿದ್ದರು. ಆದರೆ, ಆ ನಂತರ ಪ್ರೇಮಾ ಎದೆಯ ಮೇಲೆ ಯುವಕನೊಬ್ಬನ ಹೆಸರಿನ ಹಚ್ಚೆ ಇರುವುದನ್ನು ಕಂಡು ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅದು ಕೇವಲ ಸ್ನೇಹಿತನ ಹೆಸರು ಎಂದು ಪ್ರೇಮಾ ಹೇಳಿದ್ದರೂ, ಶಿವಕುಮಾರ್ ಅದನ್ನು ಅನುಮಾನಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಹಚ್ಚೆ ವಿಚಾರ ಮಾತ್ರವಲ್ಲ ವರದಕ್ಷಿಣೆ ತರುವಂತೆ ಶಿವಕುಮಾರ್ ಪ್ರೇಮಾ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಎಂದು ಪ್ರೇಮಾ ತಾಯಿ ಶಕುಂತಲಾ ಆರೋಪಿಸಿದ್ದಾರೆ. ಮೂರು ತಿಂಗಳ ಹಿಂದೆ ಗರ್ಭಪಾತವಾಗಿತ್ತು. ಆಗಲೂ ಪತಿ ಸರಿಯಾಗಿ ನೋಡಿಕೊಳ್ಳದೇ ಹಿಂಸಿಸುತ್ತಿದ್ದ. ತಿಂಗಳ ಹಿಂದೆಯಷ್ಟೇ ಜಗಳ ಮಾಡಿ ತವರು ಮನೆ ಕಳುಹಿಸಿದ್ದ. ಬಳಿಕ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಶಿವಕುಮಾರ್ ಮತ್ತೆ ಮನೆಗೆ ಕರೆತಂದಿದ್ದ. ಆದರೆ ಮನೆಗೆ ಬಂದ ತಿಂಗಳೊಳಗೆ ಪ್ರೇಮಾ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಗಿದೆ.

Home add -Advt

ಪತಿ ಶಿವಕುಮಾರ್ ಹಾಗೂ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button